ಮಂಗಳೂರು, ಆ. 09 (DaijiworldNews/TA): ಸಂವಿಧಾನ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳ ಆಧಾರದ ಮೇಲೆ ಅಖಂಡ ಕರ್ನಾಟಕದಲ್ಲಿ ಸಮ ಸಮಾಜವನ್ನು ನಿರ್ಮಿಸುವ ಉದ್ದೇಶದಿಂದ ಶೀಘ್ರದಲ್ಲೇ ಹೊಸ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಲೋಕಾರ್ಪಣೆಗೊಳಿಸುವುದಾಗಿ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಪ್ರಕಟಿಸಿದ್ದಾರೆ.

ಶನಿವಾರ ಮಂಗಳೂರಿಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಿನ ಸರಕಾರದ ಧೋರಣೆ ಹಾಗೂ ರಾಜಕೀಯ ಬೆಳವಣಿಗೆಗಳಿಗೆ ಜನಪರ ಆಡಳಿತವೇ ಪರಿಹಾರ. ಅದಕ್ಕಾಗಿ ಜನಪರ ಹೋರಾಟಗಾರರು ಹಾಗೂ ಸಂಘಟನಾಕಾರರನ್ನು ಒಗ್ಗೂಡಿಸಿ ರಾಜ್ಯ ಮಟ್ಟದಲ್ಲಿ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟಲಾಗುವುದು.
ಪಕ್ಷದ ಹೆಸರು ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಬರುವ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಿ ಪಕ್ಷವನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲು ಸಿದ್ಧತೆ ನಡೆಸಲಾಗಿದೆ. ಪಕ್ಷ ಸಂಘಟನೆಗಾಗಿ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದು ನುಡಿದರು.