ಉಡುಪಿ, ಆ. 09 (DaijiworldNews/TA): ಹಿರಿಯಡ್ಕ ಸಮೀಪದ ಪಡ್ಡಂನ ಕೃಷಿ ಜಮೀನಿನಲ್ಲಿ ಅಪರೂಪದ ನೀರುನಾಯಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.

ಆಗಸ್ಟ್ 7ರ ಶುಕ್ರವಾರ ರಾತ್ರಿ ಸ್ಥಳೀಯ ರೈತ ರಾಘವೇಂದ್ರ ಅವರು ತಮ್ಮ ಭತ್ತದ ಗದ್ದೆಯನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದ ವೇಳೆ ಅಸಾಮಾನ್ಯ ಪ್ರಾಣಿಯೊಂದು ಕಾಣಿಸಿಕೊಂಡಿದೆ. ಗದ್ದೆಯಲ್ಲಿ ಇದ್ದ ಪ್ರಾಣಿಯನ್ನು ಗಮನಿಸಿದ ರಾಘವೇಂದ್ರ ಅವರು, ಅದು ನೀರುನಾಯಿ ಎಂದು ಗುರುತಿಸಿದ್ದಾರೆ. ಪ್ರತ್ಯಕ್ಷಗೊಂಡ ನೀರುನಾಯಿ ತಕ್ಷಣವೇ ಅಲ್ಲಿಂದ ತೆರಳದೆ, ಶನಿವಾರ ಬೆಳಗ್ಗೆಯೂ ಅದೇ ಪ್ರದೇಶದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಸ್ಥಳೀಯರು ಹೆಚ್ಚಿನ ಕುತೂಹಲದಿಂದ ಅದನ್ನು ಗಮನಿಸಿದ್ದಾರೆ.
ಸಾಮಾನ್ಯವಾಗಿ ನದಿ, ಕೆರೆ, ತೊರೆ ಸೇರಿದಂತೆ ನೀರಿನ ಮೂಲಗಳ ಸುತ್ತಮುತ್ತ ವಾಸಿಸುವ ನೀರುನಾಯಿ, ಕೃಷಿ ಪ್ರದೇಶದ ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡಿರುವುದು ಅಪರೂಪ ಎನ್ನಲಾಗಿದೆ. ನೀರುನಾಯಿಯ ಅಪರೂಪದ ಪ್ರತ್ಯಕ್ಷತೆ ಸ್ಥಳೀಯರ ಗಮನ ಸೆಳೆದಿದ್ದು, ಈ ಪ್ರದೇಶದಲ್ಲಿ ಇಂತಹ ವನ್ಯಜೀವಿಗಳ ಸಂಚಾರವಿರುವ ಕುರಿತು ಚರ್ಚೆಗೂ ಕಾರಣವಾಗಿದೆ.