ಉಡುಪಿ, ಆ. 08 (DaijiworldNews/AA): ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಮತ್ತಿಬ್ಬರು ಆರೋಪಿಗಳನ್ನು ಕುಮಟಾದಲ್ಲಿ ಪೊಲೀಸರು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ.

ಆರೋಪಿ ಉತ್ತರಖಾಂಡದ ಅಜಯ್ ರಸ್ತೋಗಿ ಯಾನೆ ಅನ್ಮೋಲ್(23) ಎಂಬಾತನನ್ನು ಕುಮಟಾದಲ್ಲಿ, ಬಿಹಾರದ ಜಿಯಾಹುಲ್ ವಜೂಲ್ ಶೇಖ್ ಯಾನೆ ದೀಪಕ್(38) ಎಂಬಾತನನ್ನು ಭಟ್ಕಳದಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಮೊದಲು ಉತ್ತರ ಪ್ರದೇಶ ಥಾಣಾ ಪಿಲ್ವದ ರಾಜು(42) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ.
ಉದ್ಯಮಿ ಡೇವಿಡ್ ಡಿಸೋಜಾ ಅವರು ಕಾಪು ತಾಲೂಕು ಮುದರಂಗಡಿ ಎಂಬಲ್ಲಿರುವ ಸೆಂಟ್ ಕ್ಷೇವಿಯರ್ ಚರ್ಚ್ನ ಕಾಂಪ್ಲೆಕ್ಸ್ನಲ್ಲಿ ಪ್ರಿನ್ಸ್ ಎಂಟರ್ಪ್ರೈಸಸ್ ಹೊಂದಿದ್ದರು. ಅವರು ಕಚೇರಿಗೆ ಬಂದು ಬಳಿಕ ತನ್ನ ಥಾರ್ ವಾಹನದತ್ತ ತೆರಳಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಆರೋಪಿಗಳು ಡೇವಿಡ್ ಡಿಸೋಜಾ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 66/2026 ಕಲಂ:103, 3(5),ಬಿಎನ್ಎಸ್ & 3, 25 Arms act ರಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ವೇಳೆ ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡ 3 ಮಂದಿ ಆರೋಪಿಗಳು ಬಸ್ಸಿನಲ್ಲಿ ಭಟ್ಕಳ ಕಡೆಗೆ ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿದೆ. ಈ ಹಿನ್ನೆಲೆ ಆರೋಪಿಗಳು ಹೋಗುತ್ತಿದ್ದ ಬಸ್ಸನ್ನು ಬೈಂದೂರಿನ ಒತ್ತಿನೆಣೆ ಎಂಬಲ್ಲಿ ನಿಲ್ಲಿಸಿ ಪೊಲೀಸ್ ತಂಡವು ತಪಾಸಣೆ ನಡೆಸಲು ಮುಂದಾಗಿದೆ. ಈ ವೇಳೆ ಬಸ್ಸಿನಲಿದ್ದ 3 ಮಂದಿ ಆರೋಪಿಗಳು ಬಸ್ಸಿನಿಂದ ಇಳಿದು ಓಡಿಹೋಗುತ್ತಿದ್ದರು
ಈ ವೇಳೆ ಆರೋಪಿಗಳನ್ನು ಬೆನ್ನಟ್ಟಿ ಹಿಡಿಯುವ ಸಮಯ ಆರೋಪಿಗಳ ಪೈಕಿ ಆರೋಪಿ ರಾಜು ಕಾಪು ಪೊಲೀಸ್ ಠಾಣಾ ಪಿ.ಎಸ್.ಐ. ತೇಜಸ್ವಿ ಇವರನ್ನು ದೂಡಿ ಹಾಕಿ, ಆತನ ಕೈಯ್ಯಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿ ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹೊಡೆದು ಆತನನ್ನು ಮತ್ತು ಆತನ ವಶದಲ್ಲಿದ್ದ ಪಿಸ್ತೂಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತನು ಡೇವಿಡ್ ಡಿಸೋಜಾ ಅವರನ್ನು ತನ್ನ ಪಿಸ್ತೂಲಿನಿಂದ ಗುಂಡು ಹಾರಿ ಕೊಲೆ ಮಾಡಿದ ಆರೋಪಿಯಾಗಿರುತ್ತಾನೆ. ಈತನ ವಿರುದ್ಧ ಪೊಲೀಸರಿಗೆ ಗುಂಡು ಹಾರಿಸಿ ಗಾಯಗೊಳಿಸಿದ ಬಗ್ಗೆ ಕೊಲೆ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪ್ರಕರಣ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂದರ್ಭ ಪರಾರಿಯಾಗಿದ್ದ ಇನ್ನಿಬ್ಬರು ಆರೋಪಿಗಳ ಪೈಕಿ ಅಜಯ್ ರಸ್ತೋಗಿನನ್ನು ಕುಮಟಾ ಪೊಲೀಸರ ಸಹಕಾರದಿಂದ ಕುಮಟಾದಲ್ಲಿ, ದೀಪಕ್ ನನ್ನು ಭಟ್ಕಳ ಪೊಲೀಸರ ಸಹಕಾರದಿಂದ ಭಟ್ಕಳದಲ್ಲಿ ವಶಕ್ಕೆ ಪಡೆಯಲಾಯಿತು. ಆರೋಪಿತರು ಕೃತ್ಯಕ್ಕೆ ಬಳಸಿ ಎರ್ಮಾಲ್ ನಲ್ಲಿ ಬಿಟ್ಟು ಹೋಗಿದ್ದ ಬೈಕನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಆರೋಪಿತರನ್ನು ವಶಕ್ಕೆ ಪಡೆಯುವ ಸಮಯ ಕಾಪು ಪೊಲೀಸ್ ಠಾಣಾ ಪಿ.ಎಸ್.ಐ. ತೇಜಸ್ವಿ ಅವರಿಗೆ ಗಾಯವಾಗಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ಆರೋಪಿ ರಾಜು ಕೂಡಾ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಕೃತ್ಯಕ್ಕೆ ಮೃತ ಡೇವಿಡ್ ಡಿಸೋಜಾ ಅವರು ನಡೆಸುತ್ತಿದ್ದ ಕಾಮಗಾರಿಗೆ ಸಂಬಂಧಿಸಿದಂತೆ ಅನ್ಯ ರಾಜ್ಯದ ಕಂಪೆನಿಯೊಂದಿಗೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು. ಹೀಗಾಗಿ ಡೇವಿಡ್ ರನ್ನು ಕೊಲೆ ಮಾಡಲು ಸುಫಾರಿ ನೀಡಿದ್ದು, ಈ ಕೃತ್ಯಕ್ಕೆ ಸಹಕರಿಸಿದ, ಹಣಕಾಸಿನ ನೆರವನ್ನು ನೀಡಿದ ಮತ್ತು ಆರೋಪಿತರಿಗೆ ಆಶ್ರಯ ನೀಡಿದವರ ಕುರಿತು ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ, ಇವರ ನೇತ್ರತ್ವದಲ್ಲಿ, ಕಾಪು ವೃತ್ತ ನಿರೀಕ್ಷಕರಾದ ಅಝ್ಮತ್ ಆಲಿ ಜಿ, ಡಿ.ಎಸ್.ಬಿ. ವಿಭಾಗದ ಪಿ.ಐ. ಹರೀಶ್, ಬೈಂದೂರು ವೃತ್ತ ನಿರೀಕ್ಷಕರಾದ ಶಿವಕುಮಾರ್, ಕುಂದಾಪುರ ವೃತ್ತ ನಿರೀಕ್ಷಕರಾದ ಸಂತೋಷ್ ಕಾಯ್ಕಿಣಿ, ಬೈಂದೂರು ಪಿ.ಎಸ್.ಐ. ಮಹೇಶ್, ಕಾಪು ಪಿ.ಎಸ್.ಐ. ತೇಜಸ್ವಿ, ಶಿರ್ವ ಪಿ.ಎಸ್. ಮಂಜುನಾಥ ಮರಬದ, ಕೊಲ್ಲೂರು ಪಿ.ಎಸ್. ಐ. ವಿನಯ್, ಕಾರ್ಕಳ ಗ್ರಾಮಾಂತರ ಪಿ.ಎಸ್.ಐ. ಪ್ರಸನ್ನ ಎಂ.ಎಸ್. ಪಡುಬಿದ್ರಿ ಪಿ.ಎಸ್.ಐ. ಶಕ್ತಿವೇಲು ಹಾಗೂ ಅನಿಲ್, ಶಿರ್ವ ಪಿ.ಎಸ್.ಐ. ಲೋಹಿತ್ ಕುಮಾರ್, ಪ್ರೊಬೆಷನರಿ ಪಿ.ಎಸ್.ಐ. ಶಿಫಾಝ್, ಹಾಗೂ ಸಿಬ್ಬಂದಿಯವರ ತಂಡ, ಭಟ್ಕಳ ಹಾಗೂ ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾಧಿಕಾರಿಯವರು, ಬೆರಳಚ್ಚು, ಶ್ವಾನದಳ ಹಾಗೂ ಸಿ.ಡಿ.ಆರ್. ಸೆಲ್ ಉಡುಪಿ ಅವರು ಭಾಗವಹಿಸಿರುತ್ತಾರೆ.