ಮಂಗಳೂರು, ಆ. 07 (DaijiworldNews/AA): ಹವಾಮಾನ ಇಲಾಖೆಯು ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿನ ಎಲ್ಲಾ ಶಾಲೆ ಹಾಗೂ ಕಾಲೇಜುಗಳಿಗೆ ಆಗಸ್ಟ್ 8 (ಶನಿವಾರ) ರಜೆ ಘೋಷಿಸಲಾಗಿದೆ.

ಪುತ್ತೂರು ಉಪವಿಭಾಗದ ತಹಶೀಲ್ದಾರರ ಮನವಿಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕುಗಳಲ್ಲಿ ರಜೆ ಘೋಷಿಸಿ ಆದೇಶ ಹೊರಡಿಸಿದೆ.
ಈ ರಜೆ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು, ಪದವಿಪೂರ್ವ (ಪಿಯು) ಕಾಲೇಜುಗಳು, ವಸತಿ ಶಾಲೆಗಳು ಹಾಗೂ ವಸತಿ ಕಾಲೇಜುಗಳು, ಐಟಿಐ ಮತ್ತು ಡಿಪ್ಲೊಮಾ ಕಾಲೇಜುಗಳಿಗೆ ಅನ್ವಯವಾಗಲಿದೆ.
ಜಿಲ್ಲಾಡಳಿತವು ಪೋಷಕರಿಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದು, ಮಕ್ಕಳು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ಸ್ಥಳಗಳು, ಕೆರೆಗಳು, ನದಿತೀರಗಳು ಹಾಗೂ ಸಮುದ್ರ ತೀರಗಳ ಬಳಿ ತೆರಳದಂತೆ ಜಾಗ್ರತೆ ವಹಿಸುವಂತೆ ಸೂಚಿಸಿದೆ.
ಇದೇ ವೇಳೆ, ಸಮುದ್ರದಲ್ಲಿ ಅಲೆಗಳ ಅಬ್ಬರ ಹಾಗೂ ಪ್ರತಿಕೂಲ ಹವಾಮಾನ ಇರುವುದರಿಂದ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.