Karavali
ಕಾಪು: ಪ್ರಕೃತಿ ವಿಕೋಪದಿಂದ ಜನರಿಗೆ ಉಂಟಾಗುವ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸಿ- ಸಚಿವ ಯು.ಟಿ. ಖಾದರ್ ಸೂಚನೆ
- Fri, Aug 07 2026 10:39:58 PM
-
ಕಾಪು, ಆ. 07 (DaijiworldNews/AA): ಪ್ರಕೃತಿ ವಿಕೋಪ ಹಾಗೂ ನಿರಂತರ ಮಳೆಯಿಂದ ಜನರಿಗೆ ಉಂಟಾಗುತ್ತಿರುವ ಸಂಕಷ್ಟಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಹಾಗೂ ಪರಿಹಾರ ಧನವನ್ನು ತಡಮಾಡದೆ ವಿತರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಫರೀದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.




ಶುಕ್ರವಾರ ಕಾಪು ತಾಲೂಕು ಕಚೇರಿಯಲ್ಲಿ ನಡೆದ ಪ್ರಕೃತಿ ವಿಕೋಪ ನಿರ್ವಹಣೆ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರಿ ಮಳೆಯಿಂದ ಜೀವಹಾನಿ, ಮನೆಗಳಿಗೆ ಹಾನಿ ಅಥವಾ ಇತರೆ ನಷ್ಟ ಸಂಭವಿಸಿದ ತಕ್ಷಣ ಸ್ಥಳೀಯ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ನೆರವು ಒದಗಿಸಬೇಕು ಎಂದು ನಿರ್ದೇಶಿಸಿದರು.
ನೆರೆ ನೀರಿನಿಂದ ಮನೆ ಬಳಕೆಯ ಸಾಮಗ್ರಿಗಳು, ಹಾಸಿಗೆ-ಹೊದಿಕೆಗಳು ಹಾಗೂ ಆಹಾರ ಸಾಮಗ್ರಿಗಳು ಹಾನಿಗೊಳಗಾದ ಕುಟುಂಬಗಳಿಗೆ ತಕ್ಷಣವೇ 5,500 ರೂ. ಪರಿಹಾರ ನೀಡಬೇಕು. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮಾನವೀಯತೆ ಹಾಗೂ ಸಹಾನುಭೂತಿಯಿಂದ ನೆರವು ನೀಡುವ ಮೂಲಕ ಅವರು ಗೌರವಯುತ ಜೀವನ ಮುಂದುವರಿಸಲು ಸಹಕರಿಸಬೇಕು ಎಂದು ಸಚಿವರು ಹೇಳಿದರು.
ಕಾಪು ತಾಲೂಕಿನಲ್ಲಿ ಭತ್ತದ ಕೃಷಿಯೇ ಪ್ರಮುಖವಾಗಿದ್ದು, ಸುಮಾರು 2,020 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ. ಆದರೆ ಅಸ್ಥಿರ ಹವಾಮಾನದಿಂದ ಬೆಳೆ ಹಾನಿಯಾಗಿದ್ದು, ಹಾನಿಗೊಳಗಾದ ಪ್ರದೇಶಗಳಲ್ಲಿ ಆಗಸ್ಟ್ 20ವರೆಗೆ ಮರು ನಾಟಿ ಕಾರ್ಯ ನಡೆಯಲಿದೆ. ಬೆಳೆ ಹಾನಿಯ ಸಮೀಕ್ಷೆಯನ್ನು ನಿಖರವಾಗಿ ನಡೆಸಿ ವರದಿಯನ್ನು ಶೀಘ್ರವೇ ಸರ್ಕಾರಕ್ಕೆ ಸಲ್ಲಿಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ನಿರಂತರ ಮಳೆಯಿಂದ ಅಡಿಕೆ ಸೇರಿದಂತೆ ತೋಟಗಾರಿಕಾ ಬೆಳೆಗಳಲ್ಲಿ ರೋಗಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಅಗತ್ಯ ಕೀಟನಾಶಕಗಳನ್ನು ರೈತರಿಗೆ ಲಭ್ಯವಾಗುವಂತೆ ತೋಟಗಾರಿಕಾ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು. ಈ ವರ್ಷ ಜಿಲ್ಲೆಯಲ್ಲಿ 19,236 ರೈತರು ತೋಟಗಾರಿಕಾ ಬೆಳೆ ವಿಮೆ ಮಾಡಿಸಿಕೊಂಡಿದ್ದು, ಕಳೆದ ವರ್ಷಕ್ಕಿಂತ 7,690 ರೈತರು ಹೆಚ್ಚಾಗಿದ್ದಾರೆ. ಇನ್ನಷ್ಟು ರೈತರು ಬೆಳೆ ವಿಮೆಯ ಸೌಲಭ್ಯ ಪಡೆಯುವಂತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಶಾಲೆಗಳ ಸ್ಥಿತಿಗತಿಯನ್ನೂ ಪರಿಶೀಲಿಸಿದ ಸಚಿವರು, ಕಾಪು ತಾಲೂಕಿನ 200 ಶಾಲೆಗಳಲ್ಲಿರುವ 660 ತರಗತಿ ಕೊಠಡಿಗಳ ಪೈಕಿ 91 ಕೊಠಡಿಗಳಿಗೆ ದುರಸ್ತಿ ಅಗತ್ಯವಿದೆ. ದುರಸ್ತಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ, ಅಪಾಯಕಾರಿಯಾಗಿರುವ ಕೊಠಡಿಗಳಲ್ಲಿ ಬೋಧನೆ ನಡೆಸಬಾರದು. ಶಿಥಿಲಗೊಂಡಿರುವ ಕಟ್ಟಡಗಳು ಹಾಗೂ ಶಾಲಾ ಆವರಣದ ಗೋಡೆಗಳ ಬಳಿ ವಿದ್ಯಾರ್ಥಿಗಳು ತೆರಳದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆಯ ಕುರಿತು ಪರಿಶೀಲನೆ ನಡೆಸಿದ ಅವರು, ಗುಣಮಟ್ಟ ಪರಿಶೀಲನೆಗೊಂಡ ಶೂ ಮತ್ತು ಸಾಕ್ಸ್ಗಳನ್ನು ಮಾತ್ರ ವಿದ್ಯಾರ್ಥಿಗಳಿಗೆ ವಿತರಿಸಬೇಕು. ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು ಎಂದರು. ಅಂಗನವಾಡಿ ಮಕ್ಕಳಿಗೆ ನೀಡಲಾಗುವ ಆಹಾರ, ಮೊಟ್ಟೆ ಹಾಗೂ ಹಾಲಿನ ಗುಣಮಟ್ಟವನ್ನು ಆಹಾರ ಸುರಕ್ಷತಾ ಇಲಾಖೆ ನಿಯಮಿತವಾಗಿ ಪರಿಶೀಲಿಸಬೇಕು ಎಂದರು.
ಭಾರಿ ಮಳೆಯಿಂದ ಜಿಲ್ಲೆಯ ಹಲವು ರಸ್ತೆಗಳು ಹಾನಿಗೊಳಗಾಗಿರುವುದರಿಂದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆದ್ಯತೆಯ ಮೇರೆಗೆ ರಸ್ತೆ ದುರಸ್ತಿ ಕಾರ್ಯ ಕೈಗೊಂಡು ಸಂಚಾರವನ್ನು ಸುಗಮಗೊಳಿಸಬೇಕು ಎಂದು ಸಚಿವರು ತಿಳಿಸಿದರು.
ಭಾರಿ ಮಳೆ ಮತ್ತು ಗಾಳಿಯಿಂದ 163 ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, ಸುಮಾರು 31.71 ಲಕ್ಷ ರೂ. ನಷ್ಟ ಉಂಟಾಗಿದೆ. ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆಯನ್ನು ತಕ್ಷಣ ಪುನಃಸ್ಥಾಪಿಸಬೇಕು. ಸಿಬ್ಬಂದಿ ಕೊರತೆ ಇರುವ ಪ್ರದೇಶಗಳಲ್ಲಿ ಗುತ್ತಿಗೆ ಆಧಾರದ ಲೈನ್ಮನ್ಗಳನ್ನು ನೇಮಿಸಿ, ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲು ಹಾಗೂ ಸಮಸ್ಯೆಗಳಿಗೆ ಸ್ಪಂದಿಸಲು 24x7 ಸಹಾಯವಾಣಿ ನಿರಂತರ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿದರು.
ಅಪಾಯಕಾರಿಯಾಗಿರುವ ಮರಗಳನ್ನು ತಕ್ಷಣ ತೆರವುಗೊಳಿಸುವಂತೆ ಅರಣ್ಯ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಅಪಘಾತಗಳನ್ನು ತಡೆಯಲು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸರ್ಕಾರಿ ಅಧಿಕಾರಿಗಳೇ ಸರ್ಕಾರದ ಮುಖವಾಗಿರುವುದರಿಂದ, ಜನಸ್ನೇಹಿ ಆಡಳಿತ ನೀಡುವ ಉದ್ದೇಶದಿಂದ ತಳಮಟ್ಟದಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಕಾಪು ತಹಶೀಲ್ದಾರ್ ಅವರ ಪಿ.ಡಿ. ಖಾತೆಯಲ್ಲಿರುವ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆಯೂ ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮೆಸ್ಕಾಂನಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯಗಳು ಮುಂದಿನ ದಿನ ಮಧ್ಯಾಹ್ನದವರೆಗೂ ಮುಂದುವರಿದು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ತಾಲೂಕಿನ ಹಲವು ರಸ್ತೆಗಳು ಹಾನಿಗೊಂಡಿರುವುದರಿಂದ ಶಾಲಾ ಬಸ್ ಸಂಚಾರಕ್ಕೂ ತೊಂದರೆ ಉಂಟಾಗಿ ವಿದ್ಯಾರ್ಥಿಗಳ ಹಾಜರಾತಿ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ರಸ್ತೆ ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ರಾಜ್ಯ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯ ಬಳಿಕ ಸಚಿವ ಯು.ಟಿ. ಖಾದರ್ ಅವರು ಕಾಪು ಲೈಟ್ ಗೌಸ್ ನ ಸಮೀಪದ ಕರಾವಳಿ ಕೊರೆತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ಎಂ.ಎ. ಗಫೂರ್, ಗುರ್ಮೆ ಸುರೇಶ್ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ಸ್ವರೂಪ ಟಿ.ಕೆ., ಹರಿರಾಮ್ ಶಂಕರ್, ವಿನಯ್ ಕುಮಾರ್ ಸೊರಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.