ಬಂಟ್ವಾಳ, ಆ. 07 (DaijiworldNews/AA): ಬಿ.ಸಿ.ರೋಡ್ನ ಎನ್.ಜಿ. ಸರ್ಕಲ್ನಲ್ಲಿ ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ದಯಾನಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.

ಈ ಅಪಘಾತವು ಆಗಸ್ಟ್ 6ರಂದು ಸಂಜೆ ಸುಮಾರು 6.30ರ ವೇಳೆಗೆ ಸಂಭವಿಸಿತ್ತು. ದಯಾನಂದ ಹಾಗೂ ಸ್ಕೂಟರ್ ಹಿಂಬದಿ ಸವಾರ ಯಶ್ವಂತ್ ಕುಲಾಲ್ ಅವರು ಸ್ಕೂಟರ್ನಲ್ಲಿ ಮಂಗಳೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದರು.
ಅದೇ ವೇಳೆ ಬಂಟ್ವಾಳದ ಪಲ್ಲಮಜಲು ನಿವಾಸಿ, ಸಲ್ಮಾನ್(33) ಫಾರೂಕ್ ಚಾಲನೆ ಮಾಡುತ್ತಿದ್ದ ಟಿಪ್ಪರ್ ಲಾರಿಯು ಕಲ್ಲಡ್ಕದಿಂದ ಲೊರೆಟ್ಟೊ ಕಡೆಗೆ ಸಾಗುತ್ತಿತ್ತು. ಲಾರಿಯನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ ಎನ್.ಜಿ. ಸರ್ಕಲ್ನಲ್ಲಿ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ದಯಾನಂದ ಮತ್ತು ಯಶ್ವಂತ್ ಕುಲಾಲ್ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯಶ್ವಂತ್ ಕುಲಾಲ್ ಆಸ್ಪತ್ರೆಗೆ ದಾಖಲಿಸಿದ ಕೆಲವೇ ಹೊತ್ತಿನಲ್ಲಿ ಮೃತಪಟ್ಟಿದ್ದರು. ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಯಾನಂದ ಅವರು ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಟಿಪ್ಪರ್ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)ಯ ಸೆಕ್ಷನ್ 281, 125(ಎ) ಹಾಗೂ 106(1)ರ ಅಡಿಯಲ್ಲಿ (ಅಪರಾಧ ಸಂಖ್ಯೆ 99/2026) ಪ್ರಕರಣ ದಾಖಲಾಗಿದೆ.
ಆರೋಪಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.