ಉಡುಪಿ, ಆ. 07 (DaijiworldNews/AA): ಕಳೆದ ಒಂದು ವಾರದಿಂದ ಮಟ್ಕಾ ಜೂಜಾಟದ ವಿರುದ್ಧ ಉಡುಪಿ ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರಮುಖ ಬುಕ್ಕಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಆಗಸ್ಟ್ 1ರಂದು ಕಾರ್ಕಳ ನಗರ ಠಾಣೆ ಪೊಲೀಸರು ಕಾರ್ಕಳ ಸಾರ್ವಜನಿಕ ಬಸ್ ನಿಲ್ದಾಣದ ಸಮೀಪದ ಅಂಗಡಿಯೊಂದರ ಬಳಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ಒಂದು ರೂಪಾಯಿ ಪಂತಕ್ಕೆ 70 ರೂಪಾಯಿ ನೀಡುವುದಾಗಿ ಆಮಿಷ ಒಡ್ಡುತ್ತಿದ್ದನು. ಬಂಧಿತನನ್ನು ಮಿಯ್ಯಾರು ಗ್ರಾಮದ ಬೋರ್ಕಟ್ಟೆ ನಿವಾಸಿ ವೀರೇಂದ್ರ ಶೆಟ್ಟಿ (42) ಎಂದು ಗುರುತಿಸಲಾಗಿದೆ. ಆರೋಪಿಯಿಂದ 1,415 ರೂ. ನಗದು, ಮಟ್ಕಾ ಚೀಟಿಗಳು ಹಾಗೂ ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ದಿನ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ, ಬ್ರಹ್ಮಾವರ ಪೊಲೀಸರು ಹಂದಾಡಿ ಗ್ರಾಮದ ಬಾರ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟಕ್ಕಾಗಿ ಹಣ ಸಂಗ್ರಹಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ 00 ರಿಂದ 99ವರೆಗಿನ ಸಂಖ್ಯೆಗಳ ಮೇಲೆ ಒಂದು ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಸಾರ್ವಜನಿಕರಿಗೆ ಆಮಿಷವೊಡ್ಡುತ್ತಿದ್ದನು. ಬಂಧಿತನನ್ನು ಕುಶಾಲ್ ಶೆಟ್ಟಿ (66) ಎಂದು ಗುರುತಿಸಲಾಗಿದ್ದು, ಆತನಿಂದ 2,395 ರೂ. ನಗದು, ಮಟ್ಕಾ ಚೀಟಿ ಹಾಗೂ ಬಾಲ್ಪಾಯಿಂಟ್ ಪೆನ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದಲ್ಲದೆ, ಆಗಸ್ಟ್ 1ರಂದು ಚಾಂತಾರು ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟಕ್ಕಾಗಿ ಹಣ ಸಂಗ್ರಹಿಸುತ್ತಿದ್ದ ಚಂದ್ರಶೇಖರ ಶೆಟ್ಟಿ ಅವರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಸಂಗ್ರಹಿಸಿದ ಹಣವನ್ನು ಅವರು ಕೋರ್ಗಿ ಗ್ರಾಮದ ರತ್ನಾಕರ ಶೆಟ್ಟಿ ಅವರಿಗೆ ನೀಡುತ್ತಿದ್ದು, ಅವರು ಅದೃಷ್ಟ ಸಂಖ್ಯೆಗಳ ಆಧಾರದ ಮೇಲೆ ಮಟ್ಕಾ ಜೂಜಾಟ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಆರೋಪಿಯಿಂದ 1,400 ರೂ. ನಗದು, ಮಟ್ಕಾ ಚೀಟಿ ಹಾಗೂ ಬಾಲ್ಪಾಯಿಂಟ್ ಪೆನ್ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಚಂದ್ರಶೇಖರ ಶೆಟ್ಟಿ ಹಾಗೂ ರತ್ನಾಕರ ಶೆಟ್ಟಿ ಇಬ್ಬರನ್ನೂ ಬಂಧಿಸಿ, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣದ ತನಿಖೆ ವೇಳೆ ಆರೋಪಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮಟ್ಕಾ ಜಾಲದ ಪ್ರಮುಖ ಬುಕ್ಕಿಯನ್ನು ಪತ್ತೆಹಚ್ಚಿದ್ದಾರೆ. ಬಂಧಿತ ಬುಕ್ಕಿಯನ್ನು ಉಡುಪಿ ಶಿವಳ್ಳಿ ಗ್ರಾಮದ ನಿವಾಸಿ ಲಿಯೋ ಕರ್ನೆಲಿಯೋ ಎಂದು ಗುರುತಿಸಲಾಗಿದ್ದು, ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಮಟ್ಕಾ ಜೂಜಾಟದ ವಿರುದ್ಧ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಕಠಿಣ ಕ್ರಮ ಮುಂದುವರಿಸಿದ್ದು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ.