ಹೆಬ್ರಿ, ಆ. 07 (DaijiworldNews/AA): ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಉರುಳಿಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಬ್ರಿ ಸಮೀಪದ ಹುತ್ತುರ್ಕೆ ಬಳಿ ಶುಕ್ರವಾರ ಸಂಜೆ ನಡೆದಿದೆ.

ಈ ದುರ್ಘಟನೆ ಸಂಜೆ ಸುಮಾರು 5.30ರ ವೇಳೆಗೆ ಸಂಭವಿಸಿದೆ. ಕಾರು ಹೆಬ್ರಿಯಿಂದ ಬ್ರಹ್ಮಾವರದ ಕಡೆಗೆ ಸಂಚರಿಸುತ್ತಿದ್ದ ವೇಳೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಬೃಹತ್ ಗಾತ್ರದ ಮರ ಏಕಾಏಕಿ ಬೇರು ಸಮೇತ ರಸ್ತೆಗೆ ಉರುಳಿಬಿದ್ದಿದ್ದು, ಅದರೊಂದಿಗೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಗಳೂ ಕಾರಿನ ಮೇಲೆ ಬಿದ್ದಿವೆ. ಪರಿಣಾಮ ಕಾರು ಮರ, ವಿದ್ಯುತ್ ಕಂಬ ಮತ್ತು ತಂತಿಗಳ ಅಡಿಯಲ್ಲಿ ಸಂಪೂರ್ಣವಾಗಿ ಸಿಲುಕಿಕೊಂಡಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಸ್ತೆಗೆ ಉರುಳಿಬಿದ್ದ ಮರ ಹಾಗೂ ವಿದ್ಯುತ್ ಕಂಬವನ್ನು ತೆರವುಗೊಳಿಸುವ ಕಾರ್ಯ ಪ್ರಸ್ತುತ ನಡೆಯುತ್ತಿದೆ. ಮೃತ ಚಾಲಕರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.