ಸುಳ್ಯ, ಆ. 07 (DaijiworldNews/AK): ಕ್ಯಾನ್ಸರ್ ಬಗ್ಗೆ ಮುಂಚಿತವಾಗಿ ಅರಿವು ಮೂಡಿಸುವುದೇ ಇದನ್ನು ತಡೆಗಟ್ಟುವ ಏಕೈಕ ಮಾರ್ಗ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅಭಿಪ್ರಾಯಪಟ್ಟರು.

ಸುಳ್ಯದ ರೋಟರಿ ಸಮುದಾಯ ಸಭಾಂಗಣದಲ್ಲಿ ನಡೆದ ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ರೋಟರಿ ಕ್ಲಬ್ ಸುಳ್ಯ ಮತ್ತು ಸುಳ್ಯ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ "ಅರಿವೇ ಜೀವ - ಬದುಕು” ಕ್ಯಾನ್ಸರ್ ಮಹಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲಾ ಸಂಘ ಸಂಸ್ಥೆಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಕ್ಯಾನ್ಸರ್ ಮಾಹಿತಿ ನೀಡಬೇಕಾದ ಅನಿವಾರ್ಯತೆ ಇದೆ. ರೋಟರಿ ಮತ್ತು ಪತ್ರಕರ್ತರ ಈ ಕೆಲಸ ಶ್ಲಾಘನೀಯ.
ಆರೋಗ್ಯವಂತ ಸಮಾಜ ನಿರ್ಮಾಣ ಅಂದರೆ ಅದು ಈಗಿನ ಮಕ್ಕಳಿಂದ ಮಾತ್ರ ಸಾಧ್ಯ. ಅದಕ್ಕಾಗಿಯೇ ಶಾಲಾ ಆವರಣದಲ್ಲಿ ಜಂಕ್ ಫುಡ್ ಮಾರಾಟ ನಿಷೇಧಿಸಲಾಗಿದೆ ಎಂದು ಆರೋಗ್ಯ ಸಚಿವ ಯು. ಟಿ ಖಾದರ್ ತಿಳಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಾಫ, ರಾಜ್ಯ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ಮುಖ್ಯ ಅತಿಥಿಯಾಗಿದ್ದರು. ಸುಳ್ಯ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.