ಮಂಗಳೂರು, ಆ. 03 (DaijiworldNews/AK): ಅತ್ಯಂತ ಕಿರಿಯ ವಯಸ್ಸಿನ ಯೋಗ ಕ್ಷೇತ್ರದಲ್ಲಿ ಧನುರಾಸನ ಪ್ರದರ್ಶಿಸಿ ಅಪೂರ್ವ ಸಾಧನೆ ಮೆರೆದಿರುವ ವಿದ್ಯಾರ್ಥಿನಿ ಶರಣ್ಯ ಶರತ್ ಅವರನ್ನು ಸೈಂಟ್ ಮೇರೀಸ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಗೌರವಿಸಿ, ಸನ್ಮಾನಿಸಲಾಯಿತು.



4ನೇ ತರಗತಿ ವಿದ್ಯಾರ್ಥಿನಿಯಾಗಿರುವ ಶರಣ್ಯ ಶರತ್ ಅವರು ಯೋಗ ಕ್ಷೇತ್ರದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿ ಶಾಲೆ, ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.2025ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಅತಿ ಹೆಚ್ಚು ಸಮಯ ಯೋಗ ಭಂಗಿಯನ್ನು ಪ್ರದರ್ಶಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಸಾಧನೆ ಅವರ ಹೆಸರಿಗೆ ಸೇರಿದೆ.
೨೦೨೬ರ ಜೂನ್ ೨೧ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ಇಂಟರ್ನ್ಯಾಷನಲ್ ಯೋಗ ಬುಕ್ ಆಫ್ ರೆಕಾರ್ಡ್ಸ್ ವಿಶ್ವದಾಖಲೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಟರ್ನ್ಯಾಷನಲ್ ಯೋಗ ಬುಕ್ ಆಫ್ ರೆಕಾರ್ಡ್ಸ್ನಿಂದಲೂ ಮಾನ್ಯತೆ ಪಡೆದಿದ್ದಾಳೆ.
ಇದೇ ವೇಳೆ ಗಿಸಾ (ಭಾರತ) ಆಯೋಜಿಸಿದ್ದ ಆನ್ಲೈನ್ ಬಹು ವೇದಿಕೆಗಳ ವಿಶ್ವದಾಖಲೆ ಕಾರ್ಯಕ್ರಮದಲ್ಲಿ ೫೫ ಯೋಗಪಟುಗಳೊಂದಿಗೆ ಧನುರಾಸನ ಪ್ರದರ್ಶಿಸಿ, ಅತಿ ಕಡಿಮೆ ವಯಸ್ಸಿನಲ್ಲಿ ಅತ್ಯಧಿಕ ಸಮಯ ಧನುರಾಸನ ಪ್ರದರ್ಶಿಸಿದ ಸಾಧನೆಗಾಗಿ ವಿಶ್ವದಾಖಲೆಯ ಭಾಗವಾಗಿ ಗುರುತಿಸಿಕೊಂಡಿದ್ದಾರೆ.