ಸುಳ್ಯ, ಆ. 03 (DaijiworldNews/TA): ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ತಾಲೂಕಿನ ತೊಡಿಕಾನ ಪ್ರದೇಶದಲ್ಲಿರುವ ಮತ್ಸ್ಯ ತೀರ್ಥ ಹೊಳೆ ತುಂಬಿ ಹರಿದು ರಸ್ತೆ ಸಂಪರ್ಕ ಕಡಿತಗೊಂಡಿದೆ.

ಹೊಳೆ ಉಕ್ಕಿ ರಸ್ತೆಯ ಮೇಲೆ ನೀರು ಹರಿದ ಪರಿಣಾಮ ತೊಡಿಕಾನ ದೇವಳಕ್ಕೆ ತೆರಳುವ ಪ್ರಮುಖ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ. ಅಲ್ಲದೆ ಕುಂಟುಕಾಡು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಮೇಲೆಯೂ ನೀರು ಹರಿದಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರಸ್ತೆ ಮೇಲೆ ನೀರಿನ ಹರಿವು ಹೆಚ್ಚಿರುವ ಕಾರಣ ಸ್ಥಳೀಯ ನಿವಾಸಿಗಳು ಹಾಗೂ ದೇವಳಕ್ಕೆ ತೆರಳುತ್ತಿದ್ದ ಭಕ್ತರು ತೀವ್ರ ತೊಂದರೆ ಅನುಭವಿಸಿದರು. ಹಲವೆಡೆ ವಾಹನಗಳು ಸಂಚರಿಸಲು ಸಾಧ್ಯವಾಗದೆ, ಜನರು ಪರ್ಯಾಯ ಮಾರ್ಗಗಳನ್ನು ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಇನ್ನೂ ಮಳೆ ಮುಂದುವರಿದಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವುದು ಹಾಗೂ ಹೊಳೆ-ತೊರೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯ ಸಂಚಾರ ತಪ್ಪಿಸಿ ಎಚ್ಚರಿಕೆಯಿಂದ ಇರಬೇಕೆಂದು ಸ್ಥಳೀಯ ಆಡಳಿತ ಸೂಚಿಸಿದೆ.