ಬಂಟ್ವಾಳ, ಆ. 02 (DaijiworldNews/AA): ಬಂಟ್ವಾಳ ತಾಲೂಕಿನ ರಾಯಿ ಗ್ರಾಮದಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದೆ.



ನಾಪತ್ತೆಯಾಗಿರುವ ವ್ಯಕ್ತಿಯನ್ನು ರಾಯಿ ಗ್ರಾಮದ ಪಂಚಕೋಡಿ ಮನೆಯ ನಿವಾಸಿ ಜೋಸೆಫ್ ಪಿಂಟೊ ಅವರ ಪುತ್ರ ಜೀವನ್ ಪಿಂಟೊ (48) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಪೊಳಲಿ ಸಮೀಪ ಫಲ್ಗುಣಿ ನದಿಗೆ ಸೇರುವ ಹೊಳೆಯಲ್ಲಿ ಉಂಟಾದ ಭಾರಿ ಪ್ರವಾಹದ ನೀರಿನ ರಭಸಕ್ಕೆ ಸಿಲುಕಿದ ಜೀವನ್ ಪಿಂಟೊ ಅವರು ಕೊಚ್ಚಿಕೊಂಡು ಹೋಗಿದ್ದಾರೆ. ಘಟನೆಯ ಬೆನ್ನಲ್ಲೇ ಸ್ಥಳೀಯರು ಹಾಗೂ ಸಂಬಂಧಿತ ಅಧಿಕಾರಿಗಳು ತಕ್ಷಣವೇ ಶೋಧ ಕಾರ್ಯ ಆರಂಭಿಸಿದ್ದಾರೆ.
ಹೊಳೆಯು ನೇರವಾಗಿ ಫಲ್ಗುಣಿ ನದಿಗೆ ಸೇರುವ ಹಿನ್ನೆಲೆಯಲ್ಲಿ ಶೋಧ ಕಾರ್ಯದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಸೋಮವಾರವೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.