ಬಂಟ್ವಾಳ, ಆ. 02 (DaijiworldNews/AA): ಅಡಿಕೆ ತೋಟದ ಕಂದಕಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವೃದ್ಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.

ಮೃತರನ್ನು ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ನಿವಾಸಿ ಗಿರಿಯಪ್ಪ ಸಪಲ್ಯ (75) ಎಂದು ಗುರುತಿಸಲಾಗಿದೆ.
ಗಿರಿಯಪ್ಪ ಅವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಸ್ಥಳೀಯರು ತೀವ್ರ ಹುಡುಕಾಟ ನಡೆಸಿದ ಬಳಿಕ ಶುಕ್ರವಾರ ಬೆಳಗ್ಗೆ ಕುಕ್ಕಿಲದ ಅಡಿಕೆ ತೋಟವೊಂದರ ನೀರು ಹರಿಯುವ ಚರಂಡಿಯಲ್ಲಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಅವರು ಬಿದ್ದಿರುವುದು ಪತ್ತೆಯಾಗಿದೆ.
ತಕ್ಷಣ ಅವರನ್ನು ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಅವರು ಕೊನೆಯುಸಿರೆಳೆದಿದ್ದಾರೆ.