ಬಂಟ್ವಾಳ, ಆ. 02 (DaijiworldNews/AA): ಬಂಟ್ವಾಳದಲ್ಲಿ ಈ ವರ್ಷ ಮೊದಲ ಬಾರಿಗೆ ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಶನಿವಾರ ರಾತ್ರಿ ಸುಮಾರು 9 ಗಂಟೆಗೆ ನದಿಯ ನೀರಿನ ಮಟ್ಟ 8.4 ಮೀಟರ್ ದಾಖಲಾಗಿದ್ದು, ಅಪಾಯದ ಮಟ್ಟವಾದ 8.5 ಮೀಟರ್ ಗೆ ಕೇವಲ 0.1 ಮೀಟರ್ ಮಾತ್ರ ಬಾಕಿಯಿದೆ.

ಕಂಚಿಕಾರ ಪೇಟೆಯಲ್ಲಿರುವ ನೇತ್ರಾವತಿ ನದಿ ನೀರಿನ ಮಟ್ಟ ಮಾಪನ ಕೇಂದ್ರದಲ್ಲಿ ಶನಿವಾರ ಬೆಳಗ್ಗೆ ನೀರಿನ ಮಟ್ಟ 5.6 ಮೀಟರ್ ಆಗಿದ್ದು, ಸಂಜೆ ವೇಳೆಗೆ ಅದು 7.5 ಮೀಟರ್ಗೆ ಏರಿಕೆಯಾಯಿತು. ಎಎಂಆರ್ ಹಾಗೂ ನೀರಕಟ್ಟೆ ಅಣೆಕಟ್ಟುಗಳಿಂದ ನೀರು ಹರಿಬಿಡಲಾಗಿರುವುದರಿಂದ ನದಿಯ ಹರಿವು ಮತ್ತಷ್ಟು ಹೆಚ್ಚಾಗಿದೆ.
ನದಿ ಉಕ್ಕಿ ಹರಿಯುತ್ತಿರುವುದರಿಂದ, ಸಂಪರ್ಕಿಸುವ ಉಪನದಿಗಳಿಗೆ ಹಿನ್ನೀರು ನುಗ್ಗಿದೆ. ಬಡ್ಡಕಟ್ಟೆ ಸುತ್ತಲಿನ ತೋಡುಗಳು, ಪಾಣೆಮಂಗಳೂರಿನ ಆಲಡ್ಕ ಪ್ರದೇಶ ಮತ್ತು ಪಾಣೆಮಂಗಳೂರು ಶಾಲೆ ಆವರಣದಲ್ಲಿ ಜಲಾವೃತಗೊಂಡಿರುವುದು ಕಂಡುಬಂದಿದೆ. ಜಕ್ರಿಬೆಟ್ಟು ಮೂಲಕ ಬಂಟ್ವಾಳ ಪಟ್ಟಣದಿಂದ ಬೆಳ್ತಂಗಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಕೋಟೆಕಣಿ ಪ್ರದೇಶದಲ್ಲಿ ರಸ್ತೆ ಮೇಲೆ ನೀರು ಹರಿದಿದ್ದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಪರಿಣಾಮ ಬಂಟ್ವಾಳ ಹಾಗೂ ಬೆಳ್ತಂಗಡಿ ನಡುವಿನ ರಸ್ತೆ ಸಂಪರ್ಕ ತಾತ್ಕಾಲಿಕವಾಗಿ ಕಡಿತಗೊಂಡಿದೆ.
ನದಿ ತೀರದ ಹಾಗೂ ತಗ್ಗು ಪ್ರದೇಶಗಳ ನಿವಾಸಿಗಳು ಅತ್ಯಂತ ಎಚ್ಚರಿಕೆಯಿಂದ ಇರುವಂತೆ ತಾಲೂಕು ಆಡಳಿತ ಮನವಿ ಮಾಡಿದೆ. ಅಗತ್ಯವಿದ್ದರೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನಾದ್ಯಂತ ಶನಿವಾರ ದಿನವಿಡೀ ಸುರಿದ ಭಾರೀ ಮಳೆಯಿಂದ ಹಲವೆಡೆ ಮನೆಗಳಿಗೆ ಹಾನಿಯಾಗಿದ್ದು, ಮರಗಳು ಉರುಳಿದ ಪರಿಣಾಮ ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆಯಿಂದ ಆಲಡ್ಕ ಪಟ್ಟಣ, ಅಜಿಲಮೊಗರು ಮಸೀದಿ ಆವರಣ ಹಾಗೂ ಬಂಟ್ವಾಳದ ಕೋಟೆಕಣಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ನೀರಿನ ಮಟ್ಟದಲ್ಲಿ ಕಂಡುಬಂದಿರುವ ತೀವ್ರ ಏರಿಕೆಯನ್ನು ಗಮನಿಸಿದ ಶಾಸಕ ರಾಜೇಶ್ ನಾಯ್ಕ್ ಅವರು ತಹಶೀಲ್ದಾರ್ ಮಂಜುನಾಥ್ ಅವರಿಗೆ ತಕ್ಷಣವೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಜೊತೆಗೆ, ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ತಾಲೂಕು ಕೇಂದ್ರದಲ್ಲಿಯೇ ಲಭ್ಯವಿದ್ದು, ತಮ್ಮ ಕರ್ತವ್ಯ ಸ್ಥಳವನ್ನು ಬಿಟ್ಟು ತೆರಳಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಪಾಣೆಮಂಗಳೂರು-ಆಲಡ್ಕ ಪ್ರದೇಶದಲ್ಲಿ ಪ್ರವಾಹದ ನೀರು ಈಗಾಗಲೇ ಆರು ಮನೆಗಳ ಮೆಟ್ಟಿಲುಗಳವರೆಗೆ ತಲುಪಿದ್ದು, 15 ಕುಟುಂಬಗಳ ಸದಸ್ಯರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಕಂಚಿಕಾರ್ ಪೇಟೆ, ಬಸ್ತಿಪಡ್ಪು, ಜಕ್ರಿಬೆಟ್ಟು, ಎಸ್ವಿಎಸ್ ಶಾಲಾ ಮೈದಾನ, ನಾವೂರು ಹಾಗೂ ನಂದಾವರ ಸೇರಿದಂತೆ ಪ್ರವಾಹ ಭೀತಿ ಇರುವ ತಗ್ಗು ಪ್ರದೇಶಗಳ ನಿವಾಸಿಗಳಿಗೂ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಎಸ್ವಿಎಸ್ ಶಾಲೆ ಹಾಗೂ ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯಲ್ಲಿ ಗಂಜಿ ಕೇಂದ್ರಗಳನ್ನು (ಪರಿಹಾರ ಕೇಂದ್ರಗಳು) ತೆರೆಯಲು ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಪರಿಹಾರ ಕಾರ್ಯಾಚರಣೆಯ ನೋಡಲ್ ಅಧಿಕಾರಿಯಾಗಿ ಪುರಸಭೆಯ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ.