ಬೆಳ್ತಂಗಡಿ, ಆ. 01 (DaijiworldNews/TA): ಭಾರೀ ಮಳೆಯ ಪರಿಣಾಮ ಬೆಳ್ತಂಗಡಿ ತಾಲೂಕಿನ ಹಲವು ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಡಾಜೆ ಗ್ರಾಮದಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆ ಎಲ್ಲಿದೆ, ನದಿ ಎಲ್ಲಿದೆ ಎಂಬುದೇ ಗುರುತಿಸಲಾಗದ ಸ್ಥಿತಿ ಉಂಟಾಗಿದೆ.

ಮುಂಡಾಜೆಯ ಪ್ರಮುಖ ರಸ್ತೆಗಳ ಮೇಲೆ ಮಳೆ ನೀರು ಹರಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸ್ಥಳೀಯರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಿರಂತರ ಮಳೆಯಿಂದ ತಗ್ಗು ಪ್ರದೇಶಗಳು ಸಂಪೂರ್ಣ ನೀರಿನಿಂದ ಆವೃತಗೊಂಡಿವೆ. ಮೂಲಾರು ರಸ್ತೆ, ಕಾಯರ್ತೋಡಿ ಹಾಗೂ ಸೋಮತ್ತಡ್ಕ ಭಾಗಗಳು ಕೂಡ ಪ್ರವಾಹದ ನೀರಿನಿಂದ ಮುಳುಗಡೆಯಾಗಿದ್ದು, ಹಲವು ಕಡೆ ರಸ್ತೆ ಸಂಪರ್ಕಕ್ಕೆ ಅಡ್ಡಿಯಾಗಿದೆ. ಪರಿಸ್ಥಿತಿಯನ್ನು ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸುತ್ತಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇದೇ ವೇಳೆ ಪಜಿರಡ್ಕ ಸಮೀಪ ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳು ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ನದಿಪಾತ್ರ ಹಾಗೂ ತಗ್ಗು ಪ್ರದೇಶಗಳಿಗೆ ಅನಗತ್ಯವಾಗಿ ತೆರಳದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಹವಾಮಾನ ಇಲಾಖೆ ಇನ್ನೂ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಬೆಳ್ತಂಗಡಿ ತಾಲೂಕಿನ ನದಿ ತೀರ ಹಾಗೂ ತಗ್ಗು ಪ್ರದೇಶಗಳ ನಿವಾಸಿಗಳು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ಸ್ಥಳೀಯ ಆಡಳಿತ ಅಥವಾ ವಿಪತ್ತು ನಿರ್ವಹಣಾ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.