ಕಾಸರಗೋಡು, ಆ. 01 (DaijiworldNews/TA): ಭಾರೀ ಮಳೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಕಾಸರಗೋಡು ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೊಳಿಸಿದೆ.

ಅದರಂತೆ, ಜಿಲ್ಲೆಯ ಪ್ರಸಿದ್ಧ ಗಿರಿಧಾಮ ರಾಣಿಪುರಂ ಸೇರಿದಂತೆ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳಿಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶವನ್ನು ಮುಂದಿನ ಆದೇಶದವರೆಗೆ ಸಂಪೂರ್ಣ ನಿಷೇಧಿಸಲಾಗಿದೆ. ಭಾರೀ ಮಳೆ, ಭೂಕುಸಿತದ ಆತಂಕ ಹಾಗೂ ಅಪಾಯಕಾರಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.
ಜಲಮೂಲಗಳಿಗೆ ಇಳಿಯದಂತೆ ಸೂಚನೆ : ನಿರಂತರ ಮಳೆಯಿಂದ ನದಿಗಳು, ಹೊಳೆಗಳು, ತೋಡುಗಳು ಹಾಗೂ ಜಲಪಾತಗಳಲ್ಲಿ ನೀರಿನ ಹರಿವು ಅಪಾಯಕಾರಿ ಮಟ್ಟ ತಲುಪಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಜಲಮೂಲಗಳಿಗೆ ಇಳಿಯುವುದು, ಈಜುವುದು, ದೋಣಿ ವಿಹಾರ ನಡೆಸುವುದು ಹಾಗೂ ಸೆಲ್ಫಿ ತೆಗೆಯುವುದನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ನಿಷೇಧಿಸಿದೆ.
ಗಣಿಗಾರಿಕೆ, ಕ್ವಾರಿ ಚಟುವಟಿಕೆ ಸ್ಥಗಿತ : ಮಣ್ಣಿನ ತೇವಾಂಶ ಹೆಚ್ಚಿರುವುದರಿಂದ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾನೈಟ್ ಕ್ವಾರಿಗಳು ಹಾಗೂ ಗಣಿಗಾರಿಕೆ ಚಟುವಟಿಕೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ರಾತ್ರಿ ಪ್ರಯಾಣಕ್ಕೆ ಬ್ರೇಕ್: ಗುಡ್ಡಗಾಡು ಹಾಗೂ ಘಾಟಿ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ರಾತ್ರಿ ವೇಳೆ ಅನಗತ್ಯ ಪ್ರಯಾಣವನ್ನು ಸಂಪೂರ್ಣವಾಗಿ ತಪ್ಪಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮೀನುಗಾರರಿಗೆ ಎಚ್ಚರಿಕೆ : ಅರಬ್ಬಿ ಸಮುದ್ರದಲ್ಲಿ ಬಲವಾದ ಗಾಳಿ ಹಾಗೂ ಎತ್ತರದ ಅಲೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ತೆರಳಬಾರದು ಎಂದು ಸೂಚಿಸಲಾಗಿದೆ. ಅಲ್ಲದೆ, ಸಾರ್ವಜನಿಕರು ಕಡಲತೀರಗಳಿಗೆ ಭೇಟಿ ನೀಡದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಜಿಲ್ಲಾಡಳಿತವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದೆ.