ಮಂಗಳೂರು, ಜು. 31 (DaijiworldNews/AA): ಮಂಗಳೂರು ಧರ್ಮಕ್ಷೇತ್ರದ 2026-2028 ನೇ ಸಾಲಿನ ಪಾಲನಾ ಪರಿಷತ್ ನ ಕಾರ್ಯದರ್ಶಿಯಾಗಿ ಸಿಟಿ ವಲಯದ ನೀರು ರ್ಮಾರ್ಗ ಚರ್ಚ್ ನ ಝೀಟಾ ಉಷಾ ಫೆರ್ನಾಂಡಿಸ್ ಅವರು ಆಯ್ಕೆಯಾಗಿದ್ದಾರೆ.

ಧರ್ಮಕ್ಷೇತ್ರದ ಪಾಲನಾ ಪರಿಷತ್ ನ ನೂತನ ಸಮಿತಿಯ ಚುನಾವಣೆ ಹಾಗೂ ಪದಗ್ರಹಣ ಕಾರ್ಯಕ್ರಮವು ಜುಲಾಯಿ 30ರಂದು ಗುರುವಾರ ಕೊಡಿಯಾಲ್ ಬೈಲಿನ ಬಿಷಪ್ಸ್ ಹೌಸ್ ಸಭಾಂಗಣದಲ್ಲಿ ನಡೆಯಿತು. ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಸಭೆಯ ಅಧ್ಯಕ್ಷತೆ ವಹಿಸಿ, ಹೊಸ ತ್ರೈವಾರ್ಷಿಕ ಅವಧಿಯ ಧ್ಯೇಯ- ದೃಷ್ಟಿಕೋನವನ್ನು ಮಂಡಿಸಿದರು ಹಾಗೂ ನೂತನ ಪರಿಷತ್ ಸದಸ್ಯರನ್ನು ಪರಿಚಯಿಸಿದರು.
ಧರ್ಮಕ್ಷೇತ್ರದ ಶ್ರೇಷ್ಠ ಗುರು ವಂದನೀಯ ಫಾ. ಮ್ಯಾಕ್ಸಿಮ್ ಎಲ್. ನೊರೊನ್ಹಾ ಕಳೆದ ಅವಧಿಯ ಕಾರ್ಯಚಟುವಟಿಕೆಗಳ ವರದಿ ಹಾಗೂ ಮುಂದಿನ ಪಾಸ್ಟೋರಲ್ ಯೋಜನೆಗಳನ್ನು ಮಂಡಿಸಿದರು. ಬಳಿಕ 2026-2028ನೇ ಅವಧಿಯ ವಿವಿಧ ಪದಾಧಿಕಾರಿ ಹುದ್ದೆಗಳಿಗೆ ಚುನಾವಣೆ ನಡೆಸಲಾಯಿತು.
ಚುನಾವಣೆಯಲ್ಲಿ ಸಿಟಿ ವಲಯದ ನೀರು ರ್ಮಾರ್ಗ ಚರ್ಚ್ ನ ಝೀಟಾ ಉಷಾ ಫೆರ್ನಾಂಡಿಸ್ ಅವರು ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಪುರುಷ ಪ್ರತಿನಿಧಿಯಾಗಿ ಸಿಟಿ ವಲಯದ ಕೆಲರಾಯ್ ಚರ್ಚ್ ನ ಸಂತೋಷ್ ಡಿ ಕೋಸ್ತಾ , ಮಹಿಳಾ ಪ್ರತಿನಿಧಿಯಾಗಿ ಕಿರೆಂ ವಲಯದ ಬಳಕುಂಜೆ ಚರ್ಚ್ ನ ಡಾ. ಫ್ರೀಡಾ ಫ್ಲಾವಿಯಾ ಡಿ ಸೋಜಾ, ಕ್ಯಾಥೊಲಿಕ್ ಕೌನ್ಸಿಲ್ ಆಫ್ ಇಂಡಿಯಾ ಪ್ರತಿನಿಧಿಗಳಾಗಿ ಸಂತೋಷ್ ಡಿ ಸೋಜಾ ಮತ್ತು ಲಿನೆಟ್ ಫೆರ್ನಾಂಡಿಸ್, ಕ್ಯಾಥೊಲಿಕ್ ಕೌನ್ಸಿಲ್ ಆಫ್ ಕರ್ನಾಟಕ ಪ್ರತಿನಿಧಿಗಳಾಗಿ ಆಲ್ವಿನ್ ಜೆರೊಮ್ ಡಿ ಸೋಜಾ ಪಾನೀರ್ ಮತ್ತು ಡೆನಿಸ್ ಡಿಸಿಲ್ವಾ ಕುಲಶೇಖರ ಅವರು ಆಯ್ಕೆಗೊಂಡರು.
ಚುನಾವಣಾ ಪ್ರಕ್ರಿಯೆಯ ಬಳಿಕ ಸಿಬಿಸಿಐ ಲಿತರ್ಜಿ ಆಯೋಗದ ಪ್ರತಿನಿಧಿ ವಂದನೀಯ ಡಾ. ರುಡಾಲ್ಫ್ ರಾಜ್ ಪಿಂಟೊ ಅವರು "2026-2028ರ ಸಿನೋದ್ ಅನುಷ್ಠಾನದ ಮಾರ್ಗಸೂಚಿಗಳು" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ನೂತನ ಕಾರ್ಯದರ್ಶಿ ಹಾಗೂ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿದರು.