ಕಾರ್ಕಳ, ಜು. 31 (DaijiworldNews/AA): ರಾಜ್ಯದ ಆ್ಯಂಟಿ ನಕ್ಸಲ್ ಫೋರ್ಸ್ (ಎಎನ್ಎಫ್) ಶ್ವಾನದಳದ ಬೆಲ್ಜಿಯನ್ ಮ್ಯಾಲಿನಾಯ್ಸ್ ತಳಿಯ ಹೆಣ್ಣು ಶ್ವಾನ 'ಆಲ್ಚಿ' ಎಂಟು ವರ್ಷಗಳ ಅತ್ಯುತ್ತಮ ಸೇವೆಯನ್ನು ಪೂರ್ಣಗೊಳಿಸಿ ಜುಲೈ 20ರಂದು ಗೌರವಯುತವಾಗಿ ನಿವೃತ್ತಿಗೊಂಡಿತು. ತನ್ನ ಅಸಾಧಾರಣ ಘ್ರಾಣಶಕ್ತಿ, ನಿಷ್ಠೆ ಮತ್ತು ಕರ್ತವ್ಯಪ್ರಜ್ಞೆಯ ಮೂಲಕ ನೂರಾರು ಕಾರ್ಯಾಚರಣೆಗಳಲ್ಲಿ ಭದ್ರತಾ ಪಡೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ ಆಲ್ಚಿಗೆ ಬೀಳ್ಕೊಡುಗೆ ನೀಡಲಾಯಿತು.

ಕಾರ್ಕಳದಲ್ಲಿರುವ ಎಎನ್ಎಫ್ ಮುಖ್ಯ ಕಚೇರಿಯಲ್ಲಿ ನಡೆದ ಸರಳ ಬೀಳ್ಕೊಡುಗೆ ಸಮಾರಂಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ್, ಅಧಿಕಾರಿಗಳು, ಸಿಬ್ಬಂದಿ ಹಾಗೂ ಶ್ವಾನ ನಿರ್ವಾಹಕರು ಆಲ್ಚಿಯ ಅಮೋಘ ಸೇವೆಯನ್ನು ಸ್ಮರಿಸಿ ಗೌರವ ಸಲ್ಲಿಸಿದರು.
2018ರ ಆಗಸ್ಟ್ 11ರಂದು ಜನಿಸಿದ ಆಲ್ಚಿ, ಕೇವಲ ಮೂರು ತಿಂಗಳ ವಯಸ್ಸಿನಲ್ಲೇ 2018ರ ನವೆಂಬರ್ 10ರಂದು ಎಎನ್ಎಫ್ಗೆ ಸೇರ್ಪಡೆಯಾಯಿತು. ಬಳಿಕ ಬೆಂಗಳೂರಿನ ಸಿಆರ್ಪಿಎಫ್ ಡಾಗ್ ಬ್ರೀಡಿಂಗ್ ಮತ್ತು ತರಬೇತಿ ಕೇಂದ್ರದಲ್ಲಿ 13 ತಿಂಗಳ ಕಠಿಣ ತರಬೇತಿ ಪಡೆದು ಸ್ಫೋಟಕ ಪತ್ತೆ ಹಾಗೂ ದಾಳಿ ಕಾರ್ಯಾಚರಣೆಗಳಲ್ಲಿ ಪರಿಣತಿ ಗಳಿಸಿತು. ಐಇಡಿ ಪತ್ತೆ, ಬಾಂಬ್ ಶೋಧ, ಗಸ್ತು ಮತ್ತು ಅರಣ್ಯ ಕಾರ್ಯಾಚರಣೆಗಳ ವಿಶೇಷ ತರಬೇತಿಯ ಬಳಿಕ ಕಾರ್ಕಳ ಘಟಕಕ್ಕೆ ನಿಯೋಜಿಸಲಾಯಿತು.
ತನ್ನ ಸೇವಾ ಅವಧಿಯ ಬಹುಭಾಗವನ್ನು ಆಲ್ಚಿ ಪಶ್ಚಿಮ ಘಟ್ಟದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಕಳೆದಿದೆ. ಆಗುಂಬೆ, ಹೆಬ್ರಿ, ಜಯಪುರ, ಶೃಂಗೇರಿ, ಕೊಲ್ಲೂರು, ಸುಬ್ರಹ್ಮಣ್ಯ ಹಾಗೂ ಮಡಿಕೇರಿ ಸೇರಿದಂತೆ ನಕ್ಸಲ್ ಪೀಡಿತ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ನಡೆದ ಶೋಧ, ದಾಳಿ ಹಾಗೂ ಭದ್ರತಾ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿತು.
ಸ್ಫೋಟಕಗಳು ಹಾಗೂ ಐಇಡಿಗಳನ್ನು ಪತ್ತೆಹಚ್ಚುವುದು, ಅಪಾಯಕಾರಿ ಪ್ರದೇಶಗಳ ಪರಿಶೀಲನೆ, ಅರಣ್ಯ ದಾಳಿ ಕಾರ್ಯಾಚರಣೆಗಳು ಹಾಗೂ ನಕ್ಸಲರ ಚಲನವಲನವನ್ನು ಪತ್ತೆಹಚ್ಚುವಲ್ಲಿ ಆಲ್ಚಿ ಅತ್ಯುತ್ತಮ ಸಾಧನೆ ತೋರಿತು. ಜೊತೆಗೆ, ಮುಖ್ಯಮಂತ್ರಿ ಸೇರಿದಂತೆ ಗಣ್ಯ ವ್ಯಕ್ತಿಗಳ ಕಾರ್ಕಳ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳ ಭೇಟಿಯ ವೇಳೆ ವಿಐಪಿ ಭದ್ರತೆ, ಬಾಂಬ್ ಪತ್ತೆ ಹಾಗೂ ಭದ್ರತಾ ತಪಾಸಣೆಯ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿರ್ವಹಿಸಿತು.
ಆಲ್ಚಿಯ ಸೇವಾ ಅವಧಿಯುದ್ದಕ್ಕೂ ಶ್ವಾನ ನಿರ್ವಾಹಕರಾದ ಪ್ರದೀಪ್ ಬಿ.ಡಿ. ಹಾಗೂ ಧನಂಜಯ ಅವರು ಅತ್ಯಂತ ಕಾಳಜಿ, ಸಮರ್ಪಣೆ ಮತ್ತು ವೃತ್ತಿಪರತೆಯಿಂದ ಅದನ್ನು ನೋಡಿಕೊಂಡರು. ಆಲ್ಚಿಯ ನಿವೃತ್ತಿಯ ಬಳಿಕ ಎಎನ್ಎಫ್ ಶ್ವಾನದಳದಲ್ಲಿ ಅಮರಿ, ಅಗೆರಾ ಮತ್ತು ಆಂಜಿ ಎಂಬ ಮೂರು ಶ್ವಾನಗಳು ಸೇವೆ ಮುಂದುವರಿಸಲಿವೆ.
"ಶ್ವಾನಗಳು ಪೊಲೀಸ್ ಇಲಾಖೆಯ ಭಾಗ ಮಾತ್ರವಲ್ಲ, ಇಲಾಖೆಯ ಧೈರ್ಯಶಾಲಿ ಸಹಯೋಧರು. ಸೇವಾ ಅವಧಿಯಲ್ಲಿ 'ಅಲ್ಚಿ' ಪ್ರದರ್ಶಿಸಿದ ನಿಷ್ಠೆ, ಶೌರ್ಯ ಮತ್ತು ಕರ್ತವ್ಯಪರತೆ ನಮ್ಮೆಲ್ಲರಿಗೂ ಸದಾ ಸ್ಫೂರ್ತಿದಾಯಕ. ಎಎನ್ಎಫ್ ಅದರ ಸೇವೆಯನ್ನು ಸದಾ ಕೃತಜ್ಞತೆಯಿಂದ ಸ್ಮರಿಸಲಿದೆ" ಎಂದು ಎಎನ್ಎಫ್ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.