ಮಂಗಳೂರು , ಜು. 30 (DaijiworldNews/AK): ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕುರಿತು ಬಳಸಿರುವ ಭಾಷೆ ಹಾಗೂ ವೈಯಕ್ತಿಕ ಆರೋಪಗಳು ಅತ್ಯಂತ ಖಂಡನೀಯ, ಬೇಜವಾಬ್ದಾರಿಯುತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಗೇರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಮತಾ ಗಟ್ಟಿ ಯವರು ಆಕ್ರೋಶ ವ್ಯಕ್ತಪಡಿಸಿದರು.


ಸಾಕ್ಷ್ಯಾಧಾರವಿಲ್ಲದೆ ವ್ಯಕ್ತಿಯ ಘನತೆಗೆ ಧಕ್ಕೆ ತರುವ ಆರೋಪಗಳನ್ನು ಮಾಡುವುದು ರಾಜಕೀಯ ಸಂಸ್ಕೃತಿಯಲ್ಲ. ಜನಪ್ರತಿನಿಧಿಗಳು ವೈಯಕ್ತಿಕ ನಿಂದನೆಗಳ ಬದಲು ಜನರ ಸಮಸ್ಯೆಗಳ ಕುರಿತು ಚರ್ಚಿಸಬೇಕಾಗಿದೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.
ಇದಲ್ಲದೆ, ಯಶ್ಪಾಲ್ ಸುವರ್ಣ ಅವರು ರಾಹುಲ್ ಗಾಂಧಿ ಅವರ ಕುಟುಂಬದ ಬಗ್ಗೆ ಬೆದರಿಕೆ ಹಾಗೂ ಹಿಂಸೆಯನ್ನು ಸೂಚಿಸುವ ರೀತಿಯ ಹೇಳಿಕೆ ನೀಡಿರುವುದಾಗಿ ವರದಿಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಇಂತಹ ಹೇಳಿಕೆಗಳು ರಾಜಕೀಯ ಭಿನ್ನಾಭಿಪ್ರಾಯದ ಮಿತಿಯನ್ನು ಮೀರಿ ದ್ವೇಷ ಮತ್ತು ಪ್ರಚೋದನೆಗೆ ಉತ್ತೇಜನ ನೀಡುವಂತಿವೆ ಎಂದು ಪಕ್ಷ ತಿಳಿಸಿದೆ.
ಯಶ್ಪಾಲ್ ಸುವರ್ಣ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂತೆಗೆದುಕೊಂಡು ದೇಶದ ಜನರ ಕ್ಷಮೆ ಕೇಳಬೇಕು. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳು ಈ ಹೇಳಿಕೆಗಳ ಕುರಿತು ಕಾನೂನುಬದ್ಧವಾಗಿ ಪರಿಶೀಲನೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಸತ್ಯ, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸೌಹಾರ್ದತೆಯ ಪರವಾಗಿ ತನ್ನ ಹೋರಾಟ ಮುಂದುವರಿಯಲಿದ್ದು, ವೈಯಕ್ತಿಕ ನಿಂದನೆ, ಬೆದರಿಕೆ ಹಾಗೂ ದ್ವೇಷದ ರಾಜಕಾರಣವನ್ನು ಕಾಂಗ್ರೆಸ್ ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ವೀಣಾ, ಅಪ್ಪಿ, ಶಶಿಕಲಾ, ವೃಂದ ಪೂಜಾರಿ ಯವರು ಉಪಸ್ಥಿತರಿದ್ದರು.