ಮಂಗಳೂರು : ಒತ್ತಡ ಮತ್ತು ಆತಂಕ - ವ್ಯತ್ಯಾಸ, ಪರಿಣಾಮ ಸರಳ ಪರಿಹಾರಗಳ ಬಗ್ಗೆ ವೈದ್ಯರ ಸಲಹೆಗಳು
Wed, Jul 29 2026 04:36:35 PM
ಮಂಗಳೂರು, ಜು. 29 (DaijiworldNews/TA): ಇಂದಿನ ವೇಗದ ಜೀವನಶೈಲಿಯಲ್ಲಿ ಒತ್ತಡ ಮತ್ತು ಆತಂಕ ಪ್ರತಿಯೊಬ್ಬರ ಜೀವನದಲ್ಲೂ ಸಾಮಾನ್ಯವಾಗಿದೆ. ಆದರೆ ಈ ಒತ್ತಡ ಯಾವಾಗ ಹಾನಿಕಾರಕವಾಗುತ್ತದೆ? ಆತಂಕ ಮತ್ತು ಪ್ಯಾನಿಕ್ ಅಟ್ಯಾಕ್ ಎಂದರೇನು? ಇವುಗಳನ್ನು ನಿರ್ವಹಿಸುವುದು ಹೇಗೆ? ಈ ಎಲ್ಲಾ ವಿಷಯಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನ ನೀಡಿದ್ದಾರೆ ಫಾದರ್ ಮುಲ್ಲರ್ ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗದ ಸೀನಿಯರ್ ರೆಸಿಡೆಂಟ್ ಆಗಿರುವಂತಹ ಡಾಕ್ಟರ್ ಪ್ರೀನಾ ಕ್ರಸ್ತಾ. ಹಾಗಿದ್ರೆ ಪ್ರತಿ ಪ್ರಶ್ನೆಗೂ ಅವರ ಉತ್ತರವೇನು ತಿಳಿಯೋಣ.
1. ಒತ್ತಡ ಎಂದರೆ ಏನು? : ಒತ್ತಡ ಎಂಬುದು ನಮ್ಮ ದೇಹ ಮತ್ತು ಮನಸ್ಸು ಯಾವುದೇ ಒಂದು ಪರಿಸ್ಥಿತಿಗೆ ನೀಡುವ ಸಹಜವಾದ ಪ್ರತಿಕ್ರಿಯೆ . ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಫೇಸ್ ಮಾಡಲು ನಮಗೆ ಸ್ವಲ್ಪ ಮಟ್ಟಿನ ಒತ್ತಡದ ಅಗತ್ಯವಿರುತ್ತದೆ. ಒತ್ತಡವನ್ನು ನಾವು ಉಪ್ಪಿಗೆ ಹೋಲಿಸಬಹುದು. ಊಟಕ್ಕೆ ಸ್ವಲ್ಪ ಉಪ್ಪು ಹಾಕಿದರೆ ರುಚಿ ಹೆಚ್ಚಾಗುತ್ತದೆ. ಆದರೆ ಉಪ್ಪು ಅತಿಯಾದರೆ ಊಟ ತಿನ್ನಲು ಸಾಧ್ಯವಿಲ್ಲ.
2. ಪಾಸಿಟಿವ್ ಸ್ಟ್ರೆಸ್ vs ಕ್ರಾನಿಕ್ (ದೀರ್ಘಕಾಲದ) ಸ್ಟ್ರೆಸ್ : ಪಾಸಿಟಿವ್ ಸ್ಟ್ರೆಸ್ (ಒಳ್ಳೆಯ ಒತ್ತಡ): ಪರೀಕ್ಷೆಗೆ ಸಿದ್ಧರಾಗುವಾಗ ಅಥವಾ ಉದ್ಯೋಗದ ಇಂಟರ್ವ್ಯೂಗೆ ಹೋಗುವಾಗ ಬರುವ ಒತ್ತಡ. ಇದು ನಮ್ಮನ್ನು ಜೀವನದಲ್ಲಿ ಮುನ್ನೆಡೆಯಲು ಮತ್ತು ಮೋಟಿವೇಟ್ ಮಾಡಲು ಸಹಾಯ ಮಾಡುತ್ತದೆ. ಕ್ರಾನಿಕ್ ಸ್ಟ್ರೆಸ್ (ದೀರ್ಘಕಾಲದ ಒತ್ತಡ): ಹಣಕಾಸಿನ ಸಮಸ್ಯೆ, ಕೌಟುಂಬಿಕ ಅಥವಾ ದಾಂಪತ್ಯ ಜೀವನದ ಕಲಹಗಳು, ಕೆಲಸದ ಒತ್ತಡ ವಾರಗಳು ಅಥವಾ ತಿಂಗಳುಗಳ ಕಾಲ ಕಂಟಿನ್ಯೂಸ್ ಆಗಿದ್ದಾಗ ಅದು ದೀರ್ಘಕಾಲದ ಒತ್ತಡವಾಗುತ್ತದೆ. ಇದು ಕ್ರಮೇಣ ಆತಂಕ ಅಥವಾ ಖಿನ್ನತೆಗೆ ತಿರುಗುವ ಸಾಧ್ಯತೆ ಇರುತ್ತದೆ.
3. ಒತ್ತಡ ಬಂದಾಗ ದೇಹದಲ್ಲಿ ಏನಾಗುತ್ತದೆ, ಲಕ್ಷಣಗಳು? : ಯಾವುದೇ ಒತ್ತಡದ ಪರಿಸ್ಥಿತಿ ಬಂದಾಗ ದೇಹದಲ್ಲಿ 'ಫೈಟ್ ಆರ್ ಫ್ಲೈಟ್' ರೆಸ್ಪಾನ್ಸ್ ಆಕ್ಟಿವೇಟ್ ಆಗುತ್ತದೆ. ಈ ಸಮಯದಲ್ಲಿ ದೇಹದಲ್ಲಿ ಕಾರ್ಟಿಸಾಲ್ ಮತ್ತು ಅಡ್ರಿನಲಿನ್ ಎಂಬ ಹಾರ್ಮೋನ್ಗಳು ಬಿಡುಗಡೆಯಾಗುತ್ತವೆ. ಕಂಡುಬರುವ ಸಾಮಾನ್ಯ ಲಕ್ಷಣಗಳು: ಎದೆಬಡಿತ ಜಾಸ್ತಿಯಾಗುವುದು ಅತಿಯಾಗಿ ಬೆವರುವುದು ಉಸಿರಾಟದ ವೇಗ ಹೆಚ್ಚಾಗುವುದು ಕೈ-ಕಾಲುಗಳು ಬಿಗಿಯಾಗುವುದು
4. ಒತ್ತಡ ಮತ್ತು ಆತಂಕದ ನಡುವಿನ ವ್ಯತ್ಯಾಸ : ಜನರು ಹೆಚ್ಚಾಗಿ ಇವೆರಡನ್ನೂ ಒಂದೇ ಎಂದು ಭಾವಿಸುತ್ತಾರೆ, ಆದರೆ ಇವುಗಳ ನಡುವೆ ಸ್ಪಷ್ಟ ವ್ಯತ್ಯಾಸವಿದೆ: ಒತ್ತಡ: ಇದಕ್ಕೆ ನಿರ್ದಿಷ್ಟ ಕಾರಣವಿರುತ್ತದೆ (ಉದಾಹರಣೆಗೆ: ಪರೀಕ್ಷೆ, ಕೆಲಸದ ಡೆಡ್ಲೈನ್). ಆ ಪರಿಸ್ಥಿತಿ ಮುಗಿದ ತಕ್ಷಣ ಒತ್ತಡ ಕಡಿಮೆಯಾಗುತ್ತದೆ. ಆತಂಕ: ಇದಕ್ಕೆ ನಿರ್ದಿಷ್ಟ ಕಾರಣವಿರಬೇಕೆಂದಿಲ್ಲ. ಅನಗತ್ಯವಾಗಿ "ಮುಂದೆ ಏನಾಗುತ್ತದೋ" ಎಂಬ ನೆಗೆಟಿವ್ ಯೋಚನೆಗಳು ಕಂಟಿನ್ಯೂಸ್ ಆಗಿ ಬರುವುದು, ಮತ್ತು ಪರಿಸ್ಥಿತಿಗಳನ್ನು ಎದುರಿಸಲಾಗದೆ ಓಡಿಹೋಗುವ ಮನಸ್ಥಿತಿ ಬರುವುದು ಆತಂಕ.
5. ಪ್ಯಾನಿಕ್ ಅಟ್ಯಾಕ್ ಎಂದರೇನು? ಅದನ್ನು ತಡೆಯುವುದು ಹೇಗೆ? : ಪ್ಯಾನಿಕ್ ಅಟ್ಯಾಕ್ ಎಂದರೆ ತೀವ್ರವಾದ ಭಯದ ಸ್ಥಿತಿ. ಇದರಲ್ಲಿ ಜೀವವೇ ಹೊರಟುಹೋಗುತ್ತದೆ ಎಂಬಂತಹ ಭಯ, ತಲೆಸುತ್ತು, ಕೈಕಾಲು ನಡುಕ, ಉಸಿರಾಟದ ತೊಂದರೆ ಮತ್ತು ಅತಿಯಾದ ಎದೆಬಡಿತ ಕಂಡುಬರುತ್ತದೆ. ಪ್ಯಾನಿಕ್ ಅಟ್ಯಾಕ್ ಬಂದಾಗ ಮಾಡಬೇಕಾದ ಸರಳ ಉಪಾಯಗಳು ಯಾವುವು?, ನಿದ್ರೆ, ಸೋಶಿಯಲ್ ಮೀಡಿಯಾ ಮತ್ತು ಜೀವನಶೈಲಿಯ ಪ್ರಭಾವ, ಆತಂಕಕ್ಕೆ ಪರಿಹಾರ ಕ್ರಮಗಳು ಯಾವುವು? ಈ ಎಲ್ಲಾ ವಿಚಾರದ ಕುರಿತು ಸಾಕಷ್ಟು ಮಾಹಿತಿಯನ್ನು ಸಂದರ್ಶನದಲ್ಲಿ ನೀಡಲಾಗಿದೆ. ಈ ಲಿಂಕ್ ಕೂಡಾ ನಮೂದಿಸಲಾಗಿದೆ. ಈ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.