ಮಂಗಳೂರು, ಜು. 29 (DaijiworldNews/AK): ವೃದ್ಧರೊಬ್ಬರಿಗೆ ಅಪರಿಚಿತ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಮಂಗಳವಾರ ರಾತ್ರಿ ರಾ.ಹೆ. 66ರ ಅಂಬಿಕಾರೋಡ್ ಎಂಬಲ್ಲಿ ನಡೆದಿದ್ದು, ಈ ಘಟನೆಯಿಂದ ಗಂಭೀರ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ.

ಅಂಬಿಕಾರೋಡ್ ಬಳಿಯ ಸತ್ಯನಾರಾಯಣ ಕಂಪೌಂಡ್ ನಿವಾಸಿ ದಾಮೋದರ ಪೂಜಾರಿ (72) ಮೃತಪಟ್ಟವರು.
ಅಂಬಿಕಾರೋಡ್ ಗಟ್ಟಿ ಸಮಾಜ ಭವನದ ಬಳಿಯಲ್ಲಿರುವ ಕೊರಗಜ್ಜನ ಕಟ್ಟೆಯ ಚಾಕರಿ (ಸೇವೆ) ಕಾರ್ಯ ಮಾಡುತ್ತಿದ್ದ ದಾಮೋದರ ಅವರು, ಮಂಗಳವಾರ ರಾತ್ರಿ 7 ಗಂಟೆಗೆ ಕೊರಗಜ್ಜನ ಸಾನಿಧ್ಯದಲ್ಲಿ ದೀಪ ಬೆಳಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಅವರು ಹೆದ್ದಾರಿ ದಾಟುತ್ತಿದ್ದ ವೇಳೆ ತಲಪಾಡಿಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಕಾರು ಢಿಕ್ಕಿ ಹೊಡೆದು ಪರಾರಿಯಾಗಿದೆ.
ಇದರಿಂದ ಅವರ ಎರಡು ಕಾಲುಗಳು ಮುರಿತಕ್ಕೊಳಗಾಗಿದ್ದವು. ಕೂಡಲೇ ಸ್ಥಳೀಯರು ದಾಮೋದರ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.