ಕಾಸರಗೋಡು, ಜು. 21 (DaijiworldNews/TA): ಉಕ್ರೇನ್ನ ಒಡೆಸ್ಸಾ ಕರಾವಳಿಯಲ್ಲಿ ರಷ್ಯಾ ಇತ್ತೀಚೆಗೆ ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ ಕಾಸರಗೋಡು ಮೂಲದ ಮರ್ಚೆಂಟ್ ನೇವಿ ಉದ್ಯೋಗಿ ಅಖಿಲ್ ಜೋಯನ್ (26) ರವರ ವೆಳ್ಳರಿಕುಂಡಿನಲ್ಲಿರುವ ಅಖಿಲ್ ಅವರ ನಿವಾಸಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅವರು ಇಂದು ಭೇಟಿ ನೀಡಿ, ಶೋಕತಪ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ತೀವ್ರ ಆಘಾತಕ್ಕೊಳಗಾಗಿರುವ ಕುಟುಂಬಕ್ಕೆ ಧೈರ್ಯ ತುಂಬಿದ ಜಿಲ್ಲಾಧಿಕಾರಿಗಳು, ಅಖಿಲ್ ಅವರ ಪಾರ್ಥಿವ ಶರೀರವನ್ನು ಆದಷ್ಟು ಬೇಗ ತಾಯ್ನಾಡಿಗೆ ತರಲು ಜಿಲ್ಲಾಡಳಿತವು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಭರವಸೆ ನೀಡಿದರು.
ಪಾರ್ಥಿವ ಶರೀರವನ್ನು ಭಾರತಕ್ಕೆ ಮರಳಿ ತರುವ ಪ್ರಕ್ರಿಯೆಗಾಗಿ ಜಿಲ್ಲಾಡಳಿತವು ನೋರ್ಕಾ ಇಲಾಖೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದರು. ಈ ಸಂಪೂರ್ಣ ಪ್ರಕ್ರಿಯೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.