ಮಂಗಳೂರು, ಜು. 20 (DaijiworldNews/AA): ಮಲಗಿದ್ದ ಸಹೋದರನ ಮೇಲೆ ಕೊಡಲಿಯಿಂದ ತಲೆ ಹಾಗೂ ಮುಖಕ್ಕೆ ತೀವ್ರ ಸ್ವರೂಪದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯೋರ್ವನನ್ನು ಸುರತ್ಕಲ್ ಠಾಣಾ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಆರೋಪಿಯನ್ನು ಕೊಪ್ಪಳದ ಕುಷ್ಠಗಿ ತಗ್ಯಾಳ ಮೂಲದ ಪ್ರಸ್ತುತ ಮಂಗಳೂರಿನ ಚೊಕ್ಕಬೆಟ್ಟು ನಿವಾಸಿ ಸೋಮನಾಥ(21) ಎಂದು ಗುರುತಿಸಲಾಗಿದೆ.
ಕಳೆದ 5 ವರ್ಷಗಳಿಂದ ಶಿವಲೀಲಾ ಮತ್ತು ಆಕೆಯ ಇಬ್ಬರು ಮಕ್ಕಳಾದ ಸೋಮನಾಥ ಮತ್ತು ಮಲ್ಲಿಕಾರ್ಜುನ ಅವರು ಮಂಗಳೂರು ಕಾಟಿಪಳ್ಳದ, ಚೊಕ್ಕಬೆಟ್ಟು, ಕೃಷ್ಣಮಠ ರಸ್ತೆಯ ನಿವಾಸಿ ರೇಖಾ ಎಂಬುವವರ ಮನೆಯಲ್ಲಿ ಬಾಡಿಗೆಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ.
ಜು.19 ರಂದು ರಾತ್ರಿ 11:00 ಗಂಟೆಗೆ ಮಲ್ಲಿಕಾರ್ಜುನ ಯಾವುದೋ ಹುಡುಗಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ. ಇದನ್ನು ಆರೋಪಿ ಸೋಮನಾಥ ವಿರೋಧಿಸಿದ್ದಾನೆ. ಇದಕ್ಕೆ ತಮ್ಮನಾದ ಮಲ್ಲಿಕಾರ್ಜುನನು ಉಡಾಫೆಯಿಂದ ಉತ್ರ ನೀಡಿದ್ದಾನೆ. ಇದರಿಂದ ಕೋಪಗೊಂಡ ಆರೋಪಿಯು ತಮ್ಮ ಮಲ್ಲಿಕಾರ್ಜುನ ಮಲಗಿದ ನಂತರ ಮನೆಯಲ್ಲಿಯೇ ಇದ್ದ ಕೊಡಲಿಯಿಂದ ತಲೆ ಹಾಗೂ ಮುಖಕ್ಕೆ ತೀವ್ರ ಸ್ವರೂಪದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿರುತ್ತಾನೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂಬ್ರ 89/2026 ಕಲಂ 103(1) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಆರೋಪಿ ಸೋಮನಾಥನು ಕೃಷ್ಣಾಪುರ ಮಠ ರಸ್ತೆಯ ಪರಿಸರದಲ್ಲಿ ಪೊದೆಯಲ್ಲಿ ಅವಿತುಕೊಂಡಿದ್ದವನನ್ನು ಪತ್ತೆಮಾಡಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.