ಮಂಗಳೂರು, ಜು. 20 (DaijiworldNews/AK): ಬಿ.ಸಿ. ರೋಡ್ನಲ್ಲಿ ಯುವತಿಯೊಬ್ಬಳ ಭೀಕರ ಹತ್ಯೆಯನ್ನು ತೀವ್ರವಾಗಿ ಖಂಡಿಸಿ, ಆರೋಪಿಗೆ ಜಾಮೀನು ನಿರಾಕರಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಕಠಿಣ ಕಾನೂನು ಜಾರಿಯಾಗಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಒತ್ತಾಯಿಸಿದೆ.


ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ (ನಗರ ಘಟಕ) ಅಧ್ಯಕ್ಷೆ ಎಸ್. ಅಪ್ಪಿ, ಈ ಘಟನೆಯು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಭಯದ ವಾತಾವರಣವನ್ನು ಸೃಷ್ಟಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದ ಪ್ರಗತಿಗೆ ಕೊಡುಗೆ ನೀಡಬೇಕಾದ ಯುವಜನರು ಹಿಂಸಾತ್ಮಕ ಅಪರಾಧಗಳಿಗೆ ಮೊರೆ ಹೋಗುತ್ತಿರುವುದು ದುರದೃಷ್ಟಕರ ಎಂದು ಅವರು ಹೇಳಿದರು. ಮಹಿಳೆಯರ ಮೇಲಿನ ನಿರಂತರ ಹಿಂಸಾಚಾರ, ದೌರ್ಜನ್ಯಗಳು ಮತ್ತು ಅಪರಾಧಗಳನ್ನು ಉಲ್ಲೇಖಿಸಿದ ಅವರು, ಇಂತಹ ಕೃತ್ಯಗಳು ಸಾಮಾಜಿಕ ಅಸಮಾನತೆ ಮತ್ತು ಮಾನವೀಯತೆಯ ಕುಸಿತವನ್ನು ಪ್ರತಿಬಿಂಬಿಸುತ್ತವೆ. ಯುವಕರು ಯಾವ ದಾರಿಯಲ್ಲಿ ಹೋಗುತ್ತಿದ್ದಾರೆ. ಹೆತ್ತವರಿಗೆ ಯಾವ ರೀತಿಯ ಸಂದೇಶ ನೀಡುತ್ತಿದ್ದಾರೆ ಎಂಬ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಇಂತಹ ಕೃತ್ಯಗಳಿಗೆ ಯಾರು ಕಾರಣಕರ್ತರು, ಕಾಣದ ಕೈಗಳು ಯಾವುವು ಎಂಬ ಬಗ್ಗೆ ತಿಳಿಯಬೇಕಿದೆ ಎಂದು ಹೇಳಿದರು.
ಇಂತಹ ಘಟನೆಗಳು ಮರುಕಳಿಸದಂತೆ ಕಾನೂನುಗಳನ್ನು ಬಲಪಡಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು ಮತ್ತು ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಇತರ ಸುರಕ್ಷತಾ ಮೂಲಸೌಕರ್ಯಗಳನ್ನು ಅಳವಡಿಸುವುದು ಸೇರಿದಂತೆ ಹೆಚ್ಚಿನ ಭದ್ರತಾ ಕ್ರಮಗಳಿಗೆ ಕರೆ ನೀಡಿದರು.
ಇಂತಹ ಘಟನೆಗಳನ್ನು ಮೊಬೈಲ್ ಫೋನ್ಗಳಲ್ಲಿ ರೆಕಾರ್ಡ್ ಮಾಡುವ ಬದಲು ಮಧ್ಯಪ್ರವೇಶಿಸಿ ತಡೆಯಲು ಸಹಾಯ ಮಾಡುವಂತೆ ಅಪ್ಪಿ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸಂತ್ರಸ್ತೆಯ ಕುಟುಂಬಕ್ಕೆ ಸಾಕಷ್ಟು ಪರಿಹಾರವನ್ನು ನೀಡುವಂತೆ ಮಹಿಳಾ ಕಾಂಗ್ರೆಸ್ ಮುಖ್ಯಮಂತ್ರಿಯನ್ನು ಒತ್ತಾಯಿಸಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಮುಖಂಡರಾದ ವೀಣಾ ಬೆನೆಡಿಕ್ಟ್, ಗೀತಾ ಪ್ರವೀಣ್, ಕಲಾ ಜ್ಯೋತಿ, ವೃಂದಾ, ಶಾಂತಲಾ ಗಟ್ಟಿ, ಚಂಚಲಾಕ್ಷಿ ಉಪಸ್ಥಿತರಿದ್ದರು.