ಬಂಟ್ವಾಳ, ಜು. 20 (DaijiworldNews/TA): ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಪ್ರದೇಶವಾಗಿರುವ ಬಂಟ್ವಾಳದ ಕೈಕಂಬದಲ್ಲಿ ದಿನದಿಂದ ದಿನಕ್ಕೆ ಸಂಚಾರ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುವುದು, ಒಂದೇ ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣ, ಅತಿವೇಗದಲ್ಲಿ ವಾಹನ ಓಡಿಸುವುದು, ಅಡ್ಡಾದಿಡ್ಡಿ ಚಾಲನೆ ನಡೆಸುವುದು ಸಾಮಾನ್ಯ ದೃಶ್ಯವಾಗಿದ್ದು, ಅಪಘಾತದ ಭೀತಿ ಹೆಚ್ಚಿಸಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಸಾರ್ವಜನಿಕರ ಸಂಚಾರ ಹೆಚ್ಚಿರುವ ಸಮಯದಲ್ಲಿಯೇ ಕೆಲವರು ಯಾವುದೇ ಸಂಚಾರ ನಿಯಮ ಪಾಲಿಸದೆ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ರಸ್ತೆ ದಾಟುವ ಪಾದಚಾರಿಗಳು ಹಾಗೂ ಇತರ ವಾಹನ ಸವಾರರು ಜೀವಭಯದಲ್ಲಿ ಸಂಚರಿಸುವಂತಾಗಿದೆ ಎನ್ನುವುದು ಸಾರ್ವಜನಿಕರ ಅಳಲು. ವಿಶೇಷವಾಗಿ ಅನೇಕ ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಸಂಚರಿಸುತ್ತಿರುವುದು ಕಂಡುಬರುತ್ತಿದೆ. ಕೆಲವರು ಒಂದೇ ಬೈಕ್ ನಲ್ಲಿ ಮೂವರು ಪ್ರಯಾಣಿಸುವ ಮೂಲಕ ತಮ್ಮ ಜೀವಕ್ಕೂ ಅಲ್ಲದೆ ಇತರರ ಜೀವಕ್ಕೂ ಅಪಾಯ ಉಂಟುಮಾಡುತ್ತಿದ್ದಾರೆ.
ಕೆಲ ಯುವಕರು ಅತಿವೇಗದಲ್ಲಿ ಹಾಗೂ ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯರ ಪ್ರಕಾರ, ಕೈಕಂಬದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳು ಬಹಿರಂಗವಾಗಿ ನಡೆಯುತ್ತಿದ್ದರೂ, ನಿಯಮಿತ ಪೊಲೀಸ್ ತಪಾಸಣೆ ಮತ್ತು ದಂಡ ಕ್ರಮಗಳು ಕಾಣುತ್ತಿಲ್ಲ. "ಇತರ ಕಡೆಗಳಲ್ಲಿ ನಿಯಮ ಉಲ್ಲಂಘನೆ ಕಂಡರೆ ತಕ್ಷಣ ಪ್ರಕರಣ ದಾಖಲಿಸಲಾಗುತ್ತದೆ.
ಆದರೆ ಕೈಕಂಬದಲ್ಲಿ ಮಾತ್ರ ಇಷ್ಟೊಂದು ಉಲ್ಲಂಘನೆಗಳಿದ್ದರೂ ಕ್ರಮ ಯಾಕಿಲ್ಲ?" ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತುತ್ತಿದ್ದಾರೆ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಹೆಲ್ಮೆಟ್ ರಹಿತ ಚಾಲನೆ, ಅತಿವೇಗ, ಟ್ರಿಪಲ್ ರೈಡಿಂಗ್ ಹಾಗೂ ಇತರೆ ಉಲ್ಲಂಘನೆಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.