ಮಂಗಳೂರು, ಜು. 18 (DaijiworldNews/AA): ಮಂಗಳೂರಿನ ಉರ್ವಾ ಅಶೋಕನಗರದಲ್ಲಿರುವ ಅಶೋಕ ಪ್ಯಾರಡೈಸ್ ಅಪಾರ್ಟ್ಮೆಂಟ್ ಪಕ್ಕದ ಮಳೆನೀರು ಹರಿಯುವ ತೋಡು ಕುಸಿತಗೊಂಡು ಅಪಾರ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಮನವಿ ಮೇರೆಗೆ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಸ್ಥಳೀಯರ ಪ್ರಕಾರ, ವಿವಿಧ ಪ್ರದೇಶಗಳಿಂದ ಹರಿದುಬರುವ ಮಳೆನೀರು ಒಂದೇ ತೋಡಿಗೆ ಸೇರುವುದರಿಂದ ನೀರಿನ ಒತ್ತಡ ಹೆಚ್ಚಾಗಿ ತೋಡು ಕುಸಿತಗೊಂಡಿದ್ದು, ಅದರ ಪರಿಣಾಮವಾಗಿ ಅಶೋಕ ಪ್ಯಾರಡೈಸ್ ಅಪಾರ್ಟ್ಮೆಂಟ್ನ ಕಾಂಪೌಂಡ್ ಗೋಡೆಗೂ ಹಾನಿಯಾಗಿದೆ. ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಮುನ್ನ ತಕ್ಷಣವೇ ತುರ್ತು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಐವನ್ ಡಿಸೋಜ ಅವರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರ್ಗಳಿಗೆ ತಕ್ಷಣ ತುರ್ತು ಕಾಮಗಾರಿ ಆರಂಭಿಸಿ, ಸ್ಯಾಂಡ್ಬ್ಯಾಗ್ಗಳನ್ನು ಅಳವಡಿಸುವ ಮೂಲಕ ತಾತ್ಕಾಲಿಕ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು. ಅಲ್ಲದೆ, ಶಾಶ್ವತ ತಡೆಗೋಡೆ ಹಾಗೂ ತೋಡು ದುರಸ್ತಿ ಕಾಮಗಾರಿಯನ್ನು ವಿಳಂಬ ಮಾಡದೆ ಆರಂಭಿಸುವಂತೆ ಒತ್ತಾಯಿಸಿದರು.
ಇದೇ ವೇಳೆ, ಹಾನಿಗೊಳಗಾದ ಪ್ರದೇಶದ ದುರಸ್ತಿ ಕಾಮಗಾರಿಗೆ ಅಗತ್ಯವಾಗುವ ಅಂದಾಜು ವೆಚ್ಚವನ್ನು ಕೂಡಲೇ ಸಿದ್ಧಪಡಿಸಿ, ಶಾಶ್ವತ ಕಾಮಗಾರಿ ಕೈಗೊಳ್ಳಲು ಕ್ರಮವಹಿಸಬೇಕು ಎಂದು ಸಂಬಂಧಪಟ್ಟ ಮಹಾನಗರ ಪಾಲಿಕೆ ಇಂಜಿನಿಯರ್ಗೆ ನಿರ್ದೇಶನ ನೀಡಿದರು.
ಈ ಕುರಿತು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳು ತುರ್ತು ಸ್ಪಂದನೆ ನೀಡಿ ಸಾರ್ವಜನಿಕರ ಆಸ್ತಿ-ಪಾಸ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.