ಬಂಟ್ವಾಳ, ಜು. 15 (DaijiworldNews/AA): ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಒಮಾನ್ ಕರಾವಳಿಯ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಜುಲೈ ೧೨ರ ಮಧ್ಯರಾತ್ರಿ ಕ್ಷಿಪಣಿ ದಾಳಿ ನಡೆದಿತತು. ಹಡಗಿನಿಂದ ಸುರಕ್ಷಿತವಾಗಿ ರಕ್ಷಿಸಲ್ಪಟ್ಟ ಭಾರತೀಯ ಸಿಬ್ಬಂದಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ರಚನ್ ಆರ್.ಕೆ.(25) ಕೂಡ ಒಬ್ಬರಾಗಿದ್ದಾರೆ.

ಪ್ರಸ್ತುತ ರಚನ್ ಅವರು ಒಮಾನ್ನಲ್ಲಿ ತಮ್ಮ ಶಿಪ್ಪಿಂಗ್ ಕಂಪನಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸುರಕ್ಷಿತರಾಗಿದ್ದು, ತಾವು ದುಬೈಗೆ ತೆರಳುತ್ತಿರುವುದಾಗಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ರೋಹಿತಾಕ್ಷ ಬಾಣಬೆಟ್ಟು ಅವರ ಮೂವರು ಮಕ್ಕಳಲ್ಲಿ ಕಿರಿಯವರಾದ ರಚನ್, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಮುಂಬೈನಲ್ಲಿ ಮೆರೈನ್ ಕೋರ್ಸ್ ಮಾಡಿ ಹಡಗು ಸೇವೆಗೆ ಸೇರಿದ್ದರು.
ಘಟನೆಯ ಕುರಿತು ತಂದೆಯೊಂದಿಗೆ ಮಾತನಾಡಿದ ರಚನ್, ಹಡಗಿನ ಮೇಲೆ ದಾಳಿ ಸಂಭವಿಸುವ ಸಾಧ್ಯತೆ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಆದರೂ ಹಡಗು ಒಮಾನ್ ಕರಾವಳಿಯುದ್ದಕ್ಕೂ ತನ್ನ ಸಂಚಾರ ಮುಂದುವರಿಸಿತ್ತು. ಭಾನುವಾರ ಮುಂಜಾನೆ ಸುಮಾರು 2.05 ಗಂಟೆಗೆ ಕ್ಷಿಪಣಿಯೊಂದು ಹಡಗಿಗೆ ಅಪ್ಪಳಿಸಿದೆ ಎಂದು ತಿಳಿಸಿದ್ದಾರೆ.
ದಾಳಿಯ ಪರಿಣಾಮ ಎಂಜಿನ್ ಕೊಠಡಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ನಿದ್ರೆಯಲ್ಲಿದ್ದ ಸಿಬ್ಬಂದಿ ಎಚ್ಚೆತ್ತು ತಕ್ಷಣವೇ ಜೀವ ರಕ್ಷಕ ದೋಣಿಗಳ ಮೂಲಕ ಸಮುದ್ರಕ್ಕೆ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಈ ಗೊಂದಲದ ವೇಳೆ ಪುಣೆ ಮೂಲದ ಓರ್ವ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಒಮಾನ್ ನೌಕಾಪಡೆ ಸ್ಥಳಕ್ಕೆ ಧಾವಿಸಿ ಸಿಲುಕಿದ್ದ ಸಿಬ್ಬಂದಿಯನ್ನು ರಕ್ಷಿಸಿ ಅಗತ್ಯ ನೆರವು ನೀಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರಚನ್ ಅವರ ತಂದೆ ರೋಹಿತಾಕ್ಷ ಬಾಣಬೆಟ್ಟು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯಿಂದ ಕುಟುಂಬ ತೀವ್ರ ಆತಂಕಕ್ಕೊಳಗಾಗಿತ್ತು. ನಮ್ಮ ಮಗ ಕೆಲಸ ಮಾಡುತ್ತಿದ್ದ ಹಡಗಿನ ಮೇಲೆ ದಾಳಿ ನಡೆದಿರುವ ಸುದ್ದಿ ತಿಳಿದಾಗ ಕುಟುಂಬದವರು ಭಯಭೀತರಾಗಿದ್ದೆವು. ಬಳಿಕ ರಚನ್ ಕರೆ ಮಾಡಿ ತಾನು ಸುರಕ್ಷಿತವಾಗಿರುವುದಾಗಿ ತಿಳಿಸಿದ ನಂತರವೇ ನೆಮ್ಮದಿಯಾಯಿತು. ಆದರೆ ನಾಪತ್ತೆಯಾಗಿರುವ ಸಿಬ್ಬಂದಿಯ ಬಗ್ಗೆ ತುಂಬಾ ದುಃಖವಾಗಿದೆ. ನನ್ನ ಮಗ ಸೇರಿದಂತೆ ಹತ್ತು ಭಾರತೀಯ ಸಿಬ್ಬಂದಿಯನ್ನು ರಕ್ಷಿಸಿದ ಒಮಾನ್ ನೌಕಾಪಡೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲರೂ ಶೀಘ್ರದಲ್ಲೇ ಸುರಕ್ಷಿತವಾಗಿ ಭಾರತಕ್ಕೆ ಮರಳಲಿ ಎಂದು ಪ್ರಾರ್ಥಿಸುತ್ತೇವೆ" ಎಂದು ಹೇಳಿದರು.
ರಚನ್ ಅವರ ಸಂಬಂಧಿ ಉದಯ್ ಮಾತನಾಡಿ, ಮಧ್ಯಪ್ರಾಚ್ಯದಲ್ಲಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆಯಿಂದಾಗಿ ಹಡಗಿನ ಸಿಬ್ಬಂದಿ ಸದಾ ಆತಂಕದ ವಾತಾವರಣದಲ್ಲೇ ಕೆಲಸ ಮಾಡುತ್ತಿದ್ದರು ಎಂದು ರಚನ್ ಆಗಾಗ ಹೇಳುತ್ತಿದ್ದರು. ಅವರು ಸುರಕ್ಷಿತರಾಗಿರುವುದು ಸಮಾಧಾನ ತಂದಿದ್ದು, ಶೀಘ್ರದಲ್ಲೇ ಭಾರತಕ್ಕೆ ಮರಳಲಿ ಎಂದು ಆಶಿಸಿದರು.