ಕಡಬ, ಜು. 06 (DaijiworldNews/AA): ಆಭರಣಗಳನ್ನು ಹೆಚ್ಚು ತೂಕ ಬರುವಂತೆ ಮಾಡಿ ಬ್ಯಾಂಕ್ನಲ್ಲಿ ಅಡವಿಟ್ಟು ಮೋಸ ಮಾಡಿ ಹಣ ಮಾಡಲು ಸಂಚು ರೂಪಿಸಿದ್ದ ಇಬ್ಬರನ್ನು ಕಡಬ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಜುಲೈ 3 ರಂದು ಸಂಜೆ, ಕಡಬ ಪೇಟೆಯಲ್ಲಿ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ಕಡಬ ಠಾಣಾ ಪೊಲೀಸರಿಗೆ ಮಾಹಿತಿ ಬಂದಿದೆ. ಮಾಹಿತಿ ಮೇರೆಗೆ, ಸ್ಥಳಕ್ಕೆ ತೆರಳಿ ಆ ಇಬ್ಬರು ವ್ಯಕ್ತಿಗಳನ್ನು ಪೊಲಿಸರು ವಿಚಾರಿಸಿದ್ದಾರೆ. ಈ ವೇಳೆ ಬ್ಯಾಂಕ್ ನಲ್ಲಿ ಸುಮಾರು 120 ಗ್ರಾಂ ಚಿನ್ನವನ್ನು ಅಡವಿಡಲು ಬಂದಿರುವುದಾಗಿ ಅವರುಗಳು ತಿಳಿಸಿದ್ದಾರೆ.
ಇಬ್ಬರ ವರ್ತನೆಯಿಂದ ಸಂಶಯಗೊಂಡ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದಾರೆ. ಈ ವೇಳೆ ಅವರುಗಳು ಉಪ್ಪಿನಂಗಡಿ ನಿವಾಸಿ ಮಹಮ್ಮದ್ ಫಾಯಿಝ್ (20) ಹಾಗೂ ಬಂಟ್ವಾಳ ಕಸಬಾ ನಿವಾಸಿ ಮೊಹಮ್ಮದ್ ಮುರ್ಷೀದ್ (45) ಎಂಬುದಾಗಿ ತಿಳಿಸಿರುತ್ತಾರೆ.
ಪೊಲೀಸರು ಅವರ ಬಳಿಯಿರುವ ಆಭರಣದ ಬಗ್ಗೆ ವಿಚಾರಿಸಿದಾಗ, ಈ ಬಗ್ಗೆ ಯಾವುದೇ ದಾಖಲಾತಿಯನ್ನು ತೋರಿಸದೇ ಸಮಂಜಸ ಮಾಹಿತಿ ನೀಡಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಈ ಆಭರಣಗಳನ್ನು ಹೆಚ್ಚು ತೂಕ ಬರುವಂತೆ ಮಾಡಿ ಬ್ಯಾಂಕ್ ನಲ್ಲಿ ಅಡವಿಟ್ಟು ಬ್ಯಾಂಕ್ ನವರಿಗೆ ಮೋಸ ಮಾಡಿ ಹಣ ಮಾಡುವ ಉದ್ದೇಶದಿಂದ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ: 83/2026, ಕಲಂ: 318(4), 62 BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.