ಉಡುಪಿ, ಬಸ್ ಸಮಯದ ನಿಗದಿ ವಿಚಾರವಾಗಿ ಉಂಟಾದ ವಿವಾದವೊಂದು ವಿಕೋಪಕ್ಕೆ ತಿರುಗಿ, ಎರಡು ಖಾಸಗಿ ಸಿಟಿ ಬಸ್ಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಪ್ರಯಾಣಿಕರು ಮತ್ತು ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.




ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದ ಟಿಎಂಟಿ ಬಸ್ಸಿನ ಮುಂದೆ ಪಿಎಂಟಿ ಬಸ್ಸಿನ ಚಾಲಕ ಬಸ್ ನಿಲ್ಲಿಸಿದ್ದಾನೆ. ಈ ವಿಚಾರವಾಗಿ ಎರಡೂ ಬಸ್ಸುಗಳ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ.
ಜಗಳದ ನಂತರ, ಸಿಟ್ಟಿಗೆದ್ದ ಟಿಎಂಟಿ ಬಸ್ ಚಾಲಕ, ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿ, ತನ್ನ ಬಸ್ಸನ್ನು ಪಿಎಂಟಿ ಬಸ್ಸಿಗೆ ಎರಡು ಬಾರಿ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿದ್ದಾನೆ. ಬಸ್ ಸಮಯ ಮತ್ತು ಮಾರ್ಗದ ಕಾರ್ಯಾಚರಣೆಯ ವಿಚಾರವೇ ಈ ಗಲಾಟೆಗೆ ಮೂಲ ಕಾರಣ ಎಂದು ತಿಳಿದುಬಂದಿದೆ.
ಜನನಿಬಿಡ ಬಸ್ ನಿಲ್ದಾಣದಲ್ಲಿ ನಡೆದ ಈ ಘಟನೆಯಿಂದಾಗಿ ಪ್ರಯಾಣಿಕರು ಮತ್ತು ಸಾರ್ವಜನಿಕರು ಆತಂಕಕ್ಕೊಳಗಾದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಆದರೆ ಎರಡೂ ಬಸ್ಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ ಎಂದು ವರದಿಯಾಗಿದೆ.