ವಿಟ್ಲ, ಜು. 05 (DaijiworldNews/TA): ಅಕ್ರಮವಾಗಿ ಕೆಂಪು ಕಲ್ಲು ಮತ್ತು ಮಣ್ಣು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ವಾಹನ ಮತ್ತು ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕರೋಪಾಡಿ ಗ್ರಾಮದ ಮುಗುಳಿ ಎಂಬಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಮೇರೆಗೆ ವಿಟ್ಲ ಎಸೈ ರಾಮಕೃಷ್ಣ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದರು.

ಪೊಲೀಸ್ ಇಲಾಖಾ ವಾಹನವನ್ನು ನೋಡಿ ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿದ್ದವರು ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳವನ್ನು ಪರಿಶೀಲಿಸಿದಾಗ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿರುವುದು ಕಂಡುಬಂದಿದ್ದು, ಕೃತ್ಯಕ್ಕೆ ಬಳಸಿದ ಯಂತ್ರೋಪಕರಣಗಳು ಸ್ಥಳದಲ್ಲಿದ್ದು, ಸ್ಥಳದ ಸಮೀಪದಲ್ಲೇ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸುತ್ತಿರುವುದು ಹಾಗೂ ಮಣ್ಣು ಗಣಿಗಾರಿಕೆಯ ಮಣ್ಣನ್ನು ತುಂಬಿಸಿಕೊಂಡು ಹೋಗುವ ಲಾರಿಗಳ ತೂಕ ಮಾಡಲು ವೇ ಬ್ರಿಡ್ಜ್ ಮತ್ತು ಕಟ್ಟಡ ಮಾಡಿರುವುದು ಹಾಗೂ ಯಂತ್ರೋಪಕರಣಗಳು ಪತ್ತೆಯಾಗಿದೆ.
ಸೊತ್ತುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಸ್ವಾಧೀನಪಡಿಸಿ, ಯಾವುದೇ ಪರವಾನಗಿ ಇಲ್ಲದೇ ಗಣಿಗಾರಿಕೆ ಮಾಡುತ್ತಿದ್ದ ಆರೋಪಿ ಮುಳಿಗದ್ದೆ ಝಕಾರಿಯಾ ಮತ್ತು ಇತರರ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.