ಮಂಗಳೂರು, ಜು. 04 (DaijiworldNews/TA): ನಗರ ಬೆಳೆಯುತ್ತಿದ್ದು, ಜನಸಂಖ್ಯೆಯ ಜೊತೆಗೆ ವಾರ್ಡ್ ಗಳ ಸಂಖ್ಯೆಯೂ ಜಾಸ್ತಿಯಾಗಿದೆ. ಆದರೆ ಮಂಗಳೂರಿನಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಸರಿ ಮಾಡುವುದು ಕನಸಾಗಿಯೇ ಉಳಿದಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ವಿದ್ಯುತ್ ದೀಪ ಈ ಮೂರೂ ವಿಚಾರಗಳಲ್ಲಿ ಮಂಗಳೂರು ನಗರ ಪಾಲಿಕೆ ಹೆಚ್ಚು ಗಮನ ನೀಡಿದಂತಿಲ್ಲ. ಈಗಲೂ ನಗರದ ಒಳಚರಂಡಿ ವ್ಯವಸ್ಥೆಯನ್ನು ಪಿಟ್ ಗಳ ಮೂಲಕವೇ ನಿರ್ವಹಿಸಲಾಗುತ್ತಿದೆಯೇ ಹೊರತು ಒಳಚರಂಡಿ ವ್ಯವಸ್ಥೆಯ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ.
ಬೋಳಾರಿನಲ್ಲಿ ಕೂಡ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ನಗರದ ಹಲವು ಬಾವಿಗಳ ನೀರು ಕುಡಿಯುವ ರೀತಿ ಯೋಗ್ಯವಿಲ್ಲ. ಹಲವು ರಾಜಕಾಲುವೆಗಳಲ್ಲೂ ಕೂಡ ಒಳಚರಂಡಿ ನೀರೇ ಹರಿದು ಹೋಗುವ ಸ್ಥಿತಿ ಇದೆ. ನೀರು ಮುಟ್ಟಿದರೆ ರೋಗ ಬರುವ ಪರಿಸ್ಥಿತಿ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.