ಬಂಟ್ವಾಳ, ಜು. 03 (DaijiworldNews/AA): ಕಳೆದುಹೋಗಿದ್ದ ನಗದು ಹಾಗೂ ಪ್ರಮುಖ ದಾಖಲೆಗಳಿದ್ದ ಪರ್ಸ್ ಅನ್ನು ಅದರ ಮಾಲೀಕರಿಗೆ ಹಿಂದಿರುಗಿಸಿ ಆಟೋ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಶುಕ್ರವಾರದಂದು ಕಲ್ಲಡ್ಕದಲ್ಲಿ ನಡೆದಿದೆ.

ಉಪ್ಪಿನಂಗಡಿ ಸಮೀಪದ ಪೆರ್ನೆಯ ಸತ್ಯಶ್ರೀ ಕ್ಯಾಟರಿಂಗ್ ಮತ್ತು ಮಾತೃಶ್ರೀ ಕ್ಯಾಟರಿಂಗ್ ಮಾಲೀಕರ ಸಹೋದರರಾಗಿರುವ ಆಟೋ ಚಾಲಕ ರುದ್ರೇಶ್ ಪೆರ್ನೆ ಅವರು, ಕೆಲಸದ ನಿಮಿತ್ತ ಕಲ್ಲಡ್ಕಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಕಲ್ಲಡ್ಕ ಸರ್ವಿಸ್ ರಸ್ತೆಯಲ್ಲಿ ಬಿದ್ದಿದ್ದ ಪರ್ಸ್ ಅವರಿಗೆ ದೊರೆತಿದೆ.
ಪರ್ಸ್ನಲ್ಲಿದ್ದ ಮಾಹಿತಿಯನ್ನು ಬಳಸಿಕೊಂಡು ರುದ್ರೇಶ್ ಅವರು ಮಾಲೀಕರಿಗೆ ಕರೆ ಮಾಡಿದ್ದಾರೆ. ಪಾಣೆಮಂಗಳೂರು-ಮೇಲ್ಕಾರ್ನ ಭಗವತಿ ಸ್ಟೀಲ್ಸ್ನಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿರುವ ಬೆಂಗಳೂರು ಮೂಲದ ಹಫೀಜ್ ಅವರಿಗೆ ಕರೆ ಮಾಡಿ, ಕಲ್ಲಡ್ಕ ಮಸೀದಿಯ ಬಳಿ ಬರುವಂತೆ ತಿಳಿಸಿದ್ದಾರೆ. ಅಲ್ಲಿ ಅವರಿಗೆ ಪರ್ಸ್ ಅನ್ನು ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.
ರುದ್ರೇಶ್ ಪೆರ್ನೆ ಅವರ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇನ್ನು ಇತ್ತೀಚೆಗಷ್ಟೇ ಕಲ್ಲಡ್ಕದಲ್ಲಿ ಇಂತಹದೇ ಇನ್ನೊಂದು ಘಟನೆ ನಡೆದಿತ್ತು.