ಮಂಗಳೂರು, ಜು. 03 (DaijiworldNews/AA): ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿಯೊಬ್ಬರನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಾಗಿಯಾಗಿದ್ದ 16 ಮಂದಿ ಆರೋಪಿಗಳ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ಕೇರಳದ ಕಣ್ಣೂರು ಜಿಲ್ಲೆಯ ಪತಿರಿಯಾಡ್ ಮೂಲದ ನಿಮಿಲ್ ಆರ್.ಕೆ (37), ಮಡಿಕೇರಿಯ ಇರ್ಷಾದ್ (40) ಮತ್ತು ಮುಸ್ತಫ (49) ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ:
ಜೂನ್ 29ರ ಮುಂಜಾನೆ, ವಿಕಾಸ್ ಸುಬ್ಬರಾವ್ ಧನವಾಡೆ (44) ಅವರು ತಮ್ಮ ಕುಟುಂಬದೊಂದಿಗೆ ಮಹಾರಾಷ್ಟ್ರದಿಂದ ಕೇರಳದ ಪಯ್ಯನ್ನೂರಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಎನ್.ಎಚ್-66ರ ಮೂಲಕ ಪ್ರಯಾಣಿಸುತ್ತಿದ್ದರು. ಅವರು ಬೈಕಂಪಾಡಿ ಸಮೀಪ ತಲುಪಿದಾಗ, ಎರಡು ಇನ್ನೋವಾ ಮತ್ತು ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 6-7 ಮಂದಿ ಮುಸುಕುಧಾರಿಗಳ ತಂಡವು ಇವರ ಕಾರನ್ನು ಅಡ್ಡಗಟ್ಟಿದೆ. ಆರೋಪಿಗಳು ವಿಕಾಸ್ ಅವರಿಗೆ ತಲ್ವಾರಿನಿಂದ ಬೆದರಿಸಿ, ಹಲ್ಲೆ ನಡೆಸಿ, ಅವರ ಪತ್ನಿ ಮತ್ತು ಮಗನಿದ್ದ ಕಾರನ್ನು ಅಪಹರಿಸಿ ಅವರನ್ನು ಕೆಲವು ಕಿಲೋಮೀಟರ್ ದೂರದಲ್ಲಿ ಇಳಿಸಿ ಹೋಗಿದ್ದರು.
ಆರೋಪಿಗಳು ಕಾರಿನಲ್ಲಿದ್ದ ಅಂದಾಜು 20 ಲಕ್ಷ ರೂ ಮೌಲ್ಯದ 180 ಗ್ರಾಂ ಚಿನ್ನಾಭರಣ, 10,000 ರೂ. ಮೌಲ್ಯದ ಎರಡು ಮೊಬೈಲ್ ಫೋನ್ಗಳು ಮತ್ತು 3 ಲಕ್ಷ ರೂ. ಮೌಲ್ಯದ ಕಾರು ಸೇರಿದಂತೆ ಒಟ್ಟು 23,10,000 ರೂ. ಮೌಲ್ಯದ ಸೊತ್ತು ಲೂಟಿ ಮಾಡಿದ್ದರು. ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆಯ ವೇಳೆ, ಜೂನ್ 30ರಂದು ದರೋಡೆಗೀಡಾದ ಮಾರುತಿ ಡಿಸೈರ್ ಕಾರು ಬಂಟ್ವಾಳದ ಪಚ್ಚಿನಡ್ಕದಲ್ಲಿ ನಂಬರ್ ಪ್ಲೇಟ್ ಇಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಪ್ರಕರಣದಲ್ಲಿ ಭಾಗಿಯಾಗಿದ್ದ ನಿಮಿಲ್ ಆರ್.ಕೆ ಎಂಬಾತನನ್ನು ಜುಲೈ 2ರಂದು ಕಣ್ಣೂರಿನ ಚಾಲದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದೇ ದಿನ, ದರೋಡೆಕೋರರಿಗೆ ಸಹಾಯ ಮತ್ತು ಆಶ್ರಯ ನೀಡಿದ್ದಕ್ಕಾಗಿ ಪಣಂಬೂರು ಪೊಲೀಸರು ಇರ್ಷಾದ್ನನ್ನು ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಬಂಧಿಸಿದರು. ಮತ್ತೊಬ್ಬ ಆರೋಪಿ ಮುಸ್ತಫಾ ಎಂಬಾತನನ್ನು ದರೋಡೆಕೋರರಿಗೆ ಕಾರು ಒದಗಿಸಿ ಮತ್ತು ಆಶ್ರಯ ನೀಡಿದ್ದಕ್ಕಾಗಿ, ಜುಲೈ 2ರ ರಾತ್ರಿ ಮಡಿಕೇರಿ ತಾಲೂಕಿನ ಮೂರ್ನಾಡು ಜಂಕ್ಷನ್ನ ಲಯನ್ಸ್ ಕ್ಲಬ್ ಬಳಿಯ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, 14 ಮಂದಿ ನೇರವಾಗಿ ಅಪರಾಧದಲ್ಲಿ ಭಾಗಿಯಾಗಿದ್ದರೆ, ಇಬ್ಬರು ಸಹಾಯ ಮತ್ತು ಆಶ್ರಯ ನೀಡಿದ್ದಾರೆ. ಬಂಧಿತ ಮೂವರನ್ನು ಜುಲೈ 3ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಪ್ರಸ್ತುತ, ದರೋಡೆಗೀಡಾದ ಮಾರುತಿ ಡಿಸೈರ್ ಮತ್ತು ಅಪರಾಧಕ್ಕೆ ಬಳಸಿದ್ದ ನಾಲ್ಕು ಕಾರುಗಳ ಪೈಕಿ ಒಂದು ಇನ್ನೋವಾ ಕ್ರಿಸ್ಟಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಮೂರು ವಾಹನಗಳು, 180 ಗ್ರಾಂ ಚಿನ್ನಾಭರಣ ಮತ್ತು ಎರಡು ಮೊಬೈಲ್ ಫೋನ್ಗಳ ಪತ್ತೆ ಕಾರ್ಯ ನಡೆಯುತ್ತಿದೆ. ಆರೋಪಿಗಳೆಲ್ಲರೂ ಕೊಡಗು ಜಿಲ್ಲೆ ಮತ್ತು ಕೇರಳ ರಾಜ್ಯದವರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.