ಮಂಗಳೂರು, ಜು. 01 (DaijiworldNews/AA): ಮಂಗಳವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಬುಧವಾರ ಸಂಜೆ ಗುರುಪುರ (ಫಲ್ಗುಣಿ) ನದಿಯಲ್ಲಿ ಪತ್ತೆಯಾಗಿದೆ.

ಮೃತರನ್ನು ಕೊಣಾಜೆಯ ಉರುಮನೆ ನಿವಾಸಿ ಮೊಹಮ್ಮದ್ ಆಶ್ರಫ್(40) ಎಂದು ಗುರುತಿಸಲಾಗಿದೆ.
ಅಶ್ರಫ್ ಅವರು ಇತ್ತೀಚೆಗಷ್ಟೇ ಹೊಸ ಮನೆ ನಿರ್ಮಿಸಿದ್ದರು. ಕೆಲಸ ಕಳೆದುಕೊಂಡಿದ್ದ ಅವರು ಕಳೆದ ಕೆಲವು ದಿನಗಳಿಂದ ಮನೆಯಲ್ಲೇ ಇದ್ದರು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಮಸೀದಿಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಅವರು ವಾಪಸ್ ಬಾರದಿದ್ದಾಗ, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಬುಧವಾರ ಬೆಳಗ್ಗೆ ಗುರುಪುರ ಸೇತುವೆಯ ಬಳಿ ದ್ವಿಚಕ್ರ ವಾಹನವೊಂದು ನಿಂತಿದ್ದನ್ನು ಕಂಡ ಸಾರ್ವಜನಿಕರು, ಅದರ ವಿವರ ಮತ್ತು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಕಂಡ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದರು. ನಂತರ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಸಂಜೆ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.