ಉಡುಪಿ, ಜು. 01 (DaijiworldNews/AA): ಪ್ರಸಿದ್ಧ ಹುಲಿವೇಷ ಕಲಾವಿದರೊಬ್ಬರು ಬ್ರಹ್ಮಾವರದ ಹೇರೂರಿನ ರುಡ್ಸೆಟ್ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಉಡುಪಿಯ ಸಂತೆಕಟ್ಟೆ ಲಕ್ಷ್ಮೀನಗರದ ನಿವಾಸಿ ಮಂಜುನಾಥ್ (43) ಎಂದು ಗುರುತಿಸಲಾಗಿದೆ.
ಮಂಜುನಾಥ್ ಅವರು ಗೋವಾದಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿ, ಇನ್ನಿತರ ನಾಲ್ವರೊಂದಿಗೆ ಇನ್ನೋವಾ ಕಾರಿನಲ್ಲಿ ಉಡುಪಿಗೆ ಮರಳುತ್ತಿದ್ದರು.
ಉಡುಪಿಯತ್ತ ತೆರಳುತ್ತಿದ್ದ ಖಾಸಗಿ ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾನೆ. ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಬಸ್ಸಿಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಮಂಜುನಾಥ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇತರ ನಾಲ್ವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಮಂಜುನಾಥ್ ಅವರು ಕರಾವಳಿ ಭಾಗದ ಹೆಸರಾಂತ ಹುಲಿವೇಷ ಕಲಾವಿದರಾಗಿದ್ದರು. ಹುಲಿವೇಷಧಾರಿಗಳಿಗೆ ಬಣ್ಣ ಹಚ್ಚುವ ಮತ್ತು ಅಲಂಕಾರ ಮಾಡುವ ಕಲೆಯಲ್ಲಿ ಅವರು ಅಪಾರ ಪರಿಣಿತಿ ಹೊಂದಿದ್ದರು. ತಮ್ಮ ಸೃಜನಾತ್ಮಕ ಕೆಲಸಗಳಿಗಾಗಿ ಅವರು ಕರಾವಳಿಯಾದ್ಯಂತ ಜನಪ್ರಿಯರಾಗಿದ್ದರು.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.