Karavali
ಉಳ್ಳಾಲ: ವೈದ್ಯರ ದಿನಾಚರಣೆ ಅಂಗವಾಗಿ ಮೂವರು ವೈದ್ಯರಿಗೆ ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಸನ್ಮಾನ
- Wed, Jul 01 2026 05:21:23 PM
-
ಉಳ್ಳಾಲ, ಜು. 01 (DaijiworldNews/AA): ವೈದ್ಯರ ವೃತ್ತಿ ಎನ್ನುವುದು ಸಮಯದ ಚೌಕಟ್ಟಿಗೆ ಸೀಮಿತವಾಗಿರುವುದಿಲ್ಲ. ವರ್ಷದಲ್ಲಿ 365 ದಿನಗಳೂ, ದಿನದ 24 ಗಂಟೆಗಳೂ ಸಮಾಜದ ಆರೋಗ್ಯಕ್ಕಾಗಿ ಸದಾ ಸನ್ನದ್ಧರಾಗಿರುವವರು ವೈದ್ಯರು. ಹಬ್ಬ, ಹರಿದಿನ, ಕುಟುಂಬದ ಕಾರ್ಯಕ್ರಮಗಳಿಗಿಂತ ರೋಗಿಯ ಜೀವವೇ ಅವರಿಗೆ ಮೊದಲ ಆದ್ಯತೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ವಿಶಾಲ್ ಹೆಗ್ಡೆ ಅಭಿಪ್ರಾಯಪಟ್ಟರು.

ದೇರಳಕಟ್ಟೆಯ ಅವಿಷ್ಕಾರ್ ಆಡಿಟೋರಿಯಂನಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಹಾಗೂ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿ ವತಿಯಿಂದ ಕೇರಳದ ಪಯ್ಯನ್ನೂರಿನ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಸರಸ್ವತಿ ವೇಣುಗೋಪಾಲ್, ಯಲ್ಲಾಪುರದ ಉಮ್ಮಚಗಿಯ ಕುಟುಂಬ ವೈದ್ಯ ಡಾ. ಎಂ.ಎಸ್. ಭಟ್ ಮಾರಿಗೋಳಿ ಹಾಗೂ ಮಂಗಳೂರಿನ ಕುಟುಂಬ ವೈದ್ಯ ಡಾ. ಸುಧೇಶ್ ಕೆ. ದೇರಬೈಲ್ ಅವರನ್ನು ಗೌರವಿಸಿ ಮಾತನಾಡಿದರು.
ಇಂದು ಗೌರವ ಸ್ವೀಕರಿಸಿದ 40-50 ವರ್ಷಗಳ ಕಾಲ ವೈದ್ಯಕೀಯ ಸೇವೆ ಸಲ್ಲಿಸಿರುವ ಹಿರಿಯ ವೈದ್ಯರು ಕೇವಲ ತಮ್ಮ ಕ್ಷೇತ್ರದ ಸಾಧಕರಲ್ಲ, ಅವರು ಇಂದಿನ ಯುವ ವೈದ್ಯರಿಗೆ ಸ್ಪೂರ್ತಿ, ಮಾರ್ಗದರ್ಶಕರು. ಅವರ ಅನುಭವ, ಸೇವಾ ಮನೋಭಾವ ಮತ್ತು ವೃತ್ತಿನಿಷ್ಠೆ ಮುಂದಿನ ತಲೆಮಾರಿನ ವೈದ್ಯರಿಗೆ ಆದರ್ಶವಾಗಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ವೈದ್ಯರ ಮುಂದೆ ಹೊಸ ಸವಾಲುಗಳೂ ಉದ್ಭವಿಸಿವೆ. ಕೃತಕ ಬುದ್ಧಿಮತ್ತೆಗಳಿಂದ ಮಾಹಿತಿಗಳನ್ನು ಓದಿ, ತಮ್ಮ ರೋಗದ ಬಗ್ಗೆ ಮೊದಲೇ ಊಹೆ ಮಾಡಿಕೊಂಡು ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಸ್ಥಿತಿ ವಿಭಿನ್ನವಾಗಿರುತ್ತದೆ. ಆದ್ದರಿಂದ ಆ ಮಾಹಿತಿಯನ್ನು ಮೀರಿ, ರೋಗಿಯ ಲಕ್ಷಣಗಳು, ವೈದ್ಯಕೀಯ ಇತಿಹಾಸ ಮತ್ತು ವೈದ್ಯಕೀಯ ಪರೀಕ್ಷೆಗಳ ಆಧಾರದ ಮೇಲೆ ನಿಖರವಾಗಿ ರೋಗವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ನೀಡುವುದು ವೈದ್ಯರ ಅನುಭವ, ಜ್ಞಾನ ಮತ್ತು ವಿವೇಚನೆಯಿಂದ ಮಾತ್ರ ಸಾಧ್ಯ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಉಪ ಕುಲಾಧಿಪತಿ ಪ್ರೊ. ಎಂ. ಶಾಂತರಾಮ ಶೆಟ್ಟಿ ಮಾತನಾಡಿ, ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ವೈದ್ಯರು ಯಾರು, ಅವರ ಸೇವೆಯ ಮಹತ್ವ ಏನು ಎಂಬುದನ್ನು ಇಡೀ ಜಗತ್ತೇ ಅರಿತುಕೊಂಡಿತು. ತಮ್ಮ ಕುಟುಂಬಕ್ಕಿಂತ ಸಮಾಜದ ಆರೋಗ್ಯಕ್ಕೆ ಆದ್ಯತೆ ನೀಡಿ, ಹಗಲು-ರಾತ್ರಿ ಎನ್ನದೆ ನಿರಂತರ ಸೇವೆ ಸಲ್ಲಿಸಿದ ವೈದ್ಯರ ತ್ಯಾಗ ಮತ್ತು ಸಮರ್ಪಣೆ ಎಂದಿಗೂ ಮರೆಯಲಾಗದು. ಇಂದಿಗೂ ನಸುಕಿನ 2 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ಕರ್ತವ್ಯ ನಿರ್ವಹಿಸುವ ವೈದ್ಯರ ಸಂಖ್ಯೆ ಕಡಿಮೆಯಿಲ್ಲ. ರೋಗಿಯ ಜೀವ ಉಳಿಸುವ ಹೊಣೆಗಾರಿಕೆಯ ಮುಂದೆ ಅವರಿಗೆ ಸಮಯ, ನಿದ್ರೆ, ಹಬ್ಬ-ಹರಿದಿನ ಯಾವುದೂ ಮುಖ್ಯವಾಗುವುದಿಲ್ಲ. ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆರಿಗೆ ಮಾಡಿಸಲು ವೈದ್ಯರು ನದಿಗಳನ್ನು ದಾಟಿ, ರಾತ್ರಿಯಿಂದ ಬೆಳಗ್ಗಿನವರೆಗೂ ಕಾದು ಹೆರಿಗೆ ಪ್ರಕ್ರಿಯೆ ಯಶಸ್ವಿಯಾಗಿ ಮುಗಿಸಿ, ಮತ್ತೆ ದೋಣಿಯಲ್ಲೇ ಹಿಂದಿರುಗುತ್ತಿದ್ದ ಸಂದರ್ಭಗಳಿದ್ದವು. ಆ ಸೇವೆಗೆ ಪ್ರತಿಫಲವಾಗಿ ಅವರಿಗೆ ಸಿಗುತ್ತಿದ್ದದ್ದು ಹಣವಲ್ಲ. ಬಾಳೆಹಣ್ಣಿನ ಗೊನೆ, ತೆಂಗಿನಕಾಯಿ ಅಥವಾ ರೈತರ ಪ್ರೀತಿಯ ಕಾಣಿಕೆ ಮಾತ್ರ. ಆದರೆ ಆ ಸೇವೆಯ ಹಿಂದೆ ಇದ್ದ ಮಾನವೀಯತೆ ಮತ್ತು ವೃತ್ತಿನಿಷ್ಠೆ ಅಮೂಲ್ಯವಾಗಿತ್ತು. ಇಂದು ವೈದ್ಯಕೀಯ ಕ್ಷೇತ್ರವು ರೋಬೋಟಿಕ್ ಸರ್ಜರಿ, ಅತ್ಯಾಧುನಿಕ ರೋಗನಿರ್ಣಯ ವ್ಯವಸ್ಥೆಗಳು, ಕೃತಕ ಬುದ್ಧಿಮತ್ತೆ ಸೇರಿದಂತೆ ಅನೇಕ ತಂತ್ರಜ್ಞಾನಗಳ ಮೂಲಕ ಹೊಸ ಎತ್ತರಕ್ಕೆ ತಲುಪಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಅದರ ಕೇಂದ್ರಬಿಂದುವಾಗಿ ಇರುವವರು ವೈದ್ಯರೇ ಎಂಬುದು ಸತ್ಯ. ಇಂದು ಭಾರತದ ವೈದ್ಯರ ಜ್ಞಾನ, ಕೌಶಲ್ಯ ಮತ್ತು ಸೇವಾ ಮನೋಭಾವಕ್ಕೆ ವಿಶ್ವವೇ ಗೌರವ ಸಲ್ಲಿಸುತ್ತಿದೆ. ಗುಣಮಟ್ಟದ ಚಿಕಿತ್ಸೆಗಾಗಿ ಜಗತ್ತಿನ ನಾನಾ ದೇಶಗಳಿಂದ ಸಾವಿರಾರು ಮಂದಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಇದು ಭಾರತೀಯ ವೈದ್ಯರಿಗೆ ದೊರೆಯುತ್ತಿರುವ ಅತ್ಯುನ್ನತ ಗೌರವ ಹಾಗೂ ನಮ್ಮ ದೇಶದ ವೈದ್ಯಕೀಯ ಕ್ಷೇತ್ರದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಡಾ.ವರುಣ್ ಶೆಟ್ಟಿ ಪ್ರಾರ್ಥಿಸಿದರು. ಮುಖ್ಯಅತಿಥಿಗಳಾಗಿ ಉಪಕುಲಪತಿ ಪ್ರೊ. ಎಂ.ಎಸ್. ಮೂಡಿತ್ತಾಯ, ಕುಲಸಚಿವ ಪ್ರೊ. ಹರ್ಷ ಹಳಹಳ್ಳಿ ಉಪಸ್ಥಿತರಿದ್ದರು.
ಡಾ.ಸಿದ್ದಾರ್ಥ್ ಶೆಟ್ಟಿ, ಡಾ.ನಿಶಾ ಶೆಟ್ಟಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಡೀನ್ ಡಾ. ಬಿ. ಸಂದೀಪ್ ರೈ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಆರ್. ಶೆಟ್ಟಿ ವಂದಿಸಿದರು."ನಾನು ಸಣ್ಣ ಗ್ರಾಮವಾದ ಉಮ್ಮಚ್ಚಿಗಿಯನ್ನು ನನ್ನ ಸೇವೆಯ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡೆ. ಕಳೆದ 47 ವರ್ಷಗಳಿಂದ ಅಲ್ಲಿನ ಜನರೊಂದಿಗೆ ಬೆರೆತು ಸಾಮಾನ್ಯ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದೇನೆ. 1979ರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಟುಂಬ ವೈದ್ಯರಾಗಿ ಸೇವೆ ಆರಂಭಿಸಿದ್ದೇವೆ. ಆ ಸಮಯದಲ್ಲಿ ಎಂಎಸ್, ಎಂಡಿ ಹಾಗೂ ಸೂಪರ್ ಸ್ಪೆಷಲೈಸೇಶನ್ ಮಾಡುವ ಅವಕಾಶಗಳು ಇಂದಿನಷ್ಟು ಇರಲಿಲ್ಲ. ಅವಕಾಶಗಳಿದ್ದರೂ, ಹಳ್ಳಿಯ ಜನರ ಸೇವೆಯನ್ನೇ ನಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡೆವು" ಎಂದು ಯಲ್ಲಾಪುರದ ಉಮ್ಮಚಗಿಯ ಕುಟುಂಬ ವೈದ್ಯರಾದ ಡಾ. ಎಂ.ಎಸ್. ಭಟ್ ಮಾರಿಗೋಳಿ ತಿಳಿಸಿದರು.
"ಆ ದಿನಗಳಲ್ಲಿ ಸುಮಾರು 470 ಕುಟುಂಬಗಳಿಗೆ ಒಬ್ಬರೇ ವೈದ್ಯರಾಗಿದ್ದೆವು. ಮಕ್ಕಳಿಂದ ಹಿಡಿದು ಹಿರಿಯರವರೆಗೆ, ಸಣ್ಣಪುಟ್ಟ ಕಾಯಿಲೆಯಿಂದ ತುರ್ತು ಚಿಕಿತ್ಸೆಯವರೆಗೆ ಎಲ್ಲರಿಗೂ ಒಂದೇ ವೈದ್ಯ ಎಂಬ ವ್ಯವಸ್ಥೆ ಇತ್ತು. ಇಂದು ಕುಟುಂಬ ವೈದ್ಯರ ಪರಿಕಲ್ಪನೆ ನಿಧಾನವಾಗಿ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ. ಇಂದಿನ ವೈದ್ಯಕೀಯ ವ್ಯವಸ್ಥೆ ಅತ್ಯಂತ ಪ್ರಗತಿಪರವಾಗಿದೆ. ಎಂಎಸ್, ಎಂಡಿ, ಸೂಪರ್ ಸ್ಪೆಷಲೈಸೇಶನ್ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ತಜ್ಞ ವೈದ್ಯರು ಲಭ್ಯವಿದ್ದಾರೆ. ಬೇಕಾದ ತಜ್ಞ ವೈದ್ಯರ ಮಾಹಿತಿಯನ್ನೂ ಗೂಗಲ್ ಮೂಲಕವೇ ಪಡೆಯುವಷ್ಟು ತಂತ್ರಜ್ಞಾನ ಮುಂದುವರಿದಿದೆ. ಅಂದು ವೈದ್ಯಕೀಯ ವ್ಯವಸ್ಥೆ ಉತ್ತಮವಾಗಿತ್ತು, ಇಂದು ಅದು ಇನ್ನಷ್ಟು ಸುಂದರವಾಗಿ ಬೆಳೆದಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಅಗತ್ಯ" ಎಂದು ಅವರು ಅಭಿಪ್ರಾಯಪಟ್ಟರು.
"ವೈದ್ಯ ವೃತ್ತಿ ಅತ್ಯಂತ ಗೌರವಯುತವಾದ. ಆ ಗೌರವವನ್ನು ಪ್ರತಿಯೊಬ್ಬ ವೈದ್ಯರೂ ತಮ್ಮ ಸೇವೆಯ ಮೂಲಕ ಉಳಿಸಬೇಕು. ಚಿಕಿತ್ಸೆ ಪಡೆದು ಗುಣಮುಖರಾದ ರೋಗಿಯ ಮುಖದಲ್ಲಿನ ಮಂದಹಾಸವೇ ವೈದ್ಯನಿಗೆ ಸಿಗುವ ಅತ್ಯುನ್ನತ ಪ್ರಶಸ್ತಿ. ಅದೇ ನಮ್ಮ ಸೇವೆಗೆ ಹೊಸ ಉತ್ಸಾಹ, ಸಂತೃಪ್ತಿ ಮತ್ತು ಪ್ರೇರಣೆಯನ್ನು ನೀಡುತ್ತದೆ. ಇಂದು ನಿಟ್ಟೆ ಆಸ್ಪತ್ರೆ ಜನರ ಅಪಾರ ವಿಶ್ವಾಸವನ್ನು ಗಳಿಸಿದೆ. ಯಾವುದೇ ಶಿಫಾರಸು ಅಥವಾ ಪರಿಚಯವಿಲ್ಲದೆ ರೋಗಿಗಳು ನೇರವಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ. ಇದು ಆಸ್ಪತ್ರೆಯ ಗುಣಮಟ್ಟದ ಸೇವೆ, ವೈದ್ಯರ ನಿಷ್ಠೆ ಮತ್ತು ಜನರ ವಿಶ್ವಾಸಕ್ಕೆ ದೊರೆತಿರುವ ಅತ್ಯುತ್ತಮ ಮಾನ್ಯತೆ" ಎಂದು ಅವರು ಹೇಳಿದರು.
"ನನ್ನ ಶಿಕ್ಷಣದ ಬಹುಪಾಲು ಕರ್ನಾಟಕದಲ್ಲಿಯೇ ಪೂರ್ಣಗೊಂಡಿದೆ. ವೃತ್ತಿ ಜೀವನದುದ್ದಕ್ಕೂ ಅನೇಕ ಮೂತ್ರಶಾಸ್ತ್ರ (ಯೂರಾಲಜಿ) ಸಂಬಂಧಿತ ಪ್ರಕರಣಗಳನ್ನು ಕ್ಷೇಮಾ ಆಸ್ಪತ್ರೆಗೆ ಉಲ್ಲೇಖಿಸಿದ್ದೇನೆ. ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡಿದ ಗುರುಗಳು ಮತ್ತು ಮಾರ್ಗದರ್ಶಕರಿಗೆ ನನ್ನ ಎಲ್ಲ ಸಾಧನೆಗಳನ್ನು ಅರ್ಪಿಸುತ್ತೇನೆ. ಶಾಲಾ ಶಿಕ್ಷಣದಿಂದ ಹಿಡಿದು, ವಿಜಯ ಕಾಲೇಜು, ಮೂಲ್ಕಿ ಹಾಗೂ ಬಳಿಕ ಕೆಎಂಸಿ ಮಣಿಪಾಲದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವವರೆಗೆ ಅನೇಕ ಶಿಕ್ಷಕರು ಮತ್ತು ಹಿರಿಯರು ನನ್ನನ್ನು ರೂಪಿಸಿದ್ದಾರೆ" ಎಂದು ಕೇರಳದ ಪಯ್ಯನ್ನೂರಿನ ಖ್ಯಾತ ಸ್ತ್ರೀರೋಗ ತಜ್ಞೆಯಾದ ಡಾ. ಸರಸ್ವತಿ ವೇಣುಗೋಪಾಲ್ ತಿಳಿಸಿದರು.
ವಿಶೇಷವಾಗಿ ಸ್ತ್ರೀರೋಗ ತಜ್ಞೆಯಾಗಿ ತಮ್ಮ ವೃತ್ತಿಜೀವನವನ್ನು ರೂಪಿಸುವಲ್ಲಿ ಡಾ. ಪದ್ಮಾ ರಾವ್ ಹಾಗೂ ಡಾ. ಮನೋರಮಾ ರಾವ್ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಮಹತ್ತರ ಪಾತ್ರ ವಹಿಸಿದೆ. ಅವರ ಸಲಹೆ, ಅನುಭವ ಮತ್ತು ಪ್ರೇರಣೆಯೇ ನನ್ನ ವೃತ್ತಿಜೀವನಕ್ಕೆ ಭದ್ರ ಅಡಿಪಾಯವಾಗಿದೆ. ಕುಟುಂಬದ ಬೆಂಬಲವನ್ನು ಸ್ಮರಿಸಿದ ಅವರು, "ನನ್ನ ಪತಿ ಹಾಗೂ ಮಕ್ಕಳ ಪ್ರೀತಿ, ಪ್ರೋತ್ಸಾಹ ಮತ್ತು ನಿರಂತರ ಬೆಂಬಲಕ್ಕೆ ನಾನು ಸದಾ ಋಣಿಯಾಗಿದ್ದೇನೆ. ಅವರ ಸಹಕಾರದಿಂದಲೇ ರೋಗಿಗಳ ಸೇವೆಗೆ ಸಂಪೂರ್ಣವಾಗಿ ನನ್ನನ್ನು ಸಮರ್ಪಿಸಿಕೊಳ್ಳಲು ಸಾಧ್ಯವಾಗಿದೆ. ಬದ್ಧತೆ ಮತ್ತು ಅತ್ಯುತ್ತಮ ಸೇವೆಯೊಂದಿಗೆ ವೈದ್ಯಕೀಯ ವೃತ್ತಿಯನ್ನು ಮುಂದುವರಿಸಲು ನಿರಂತರ ಪ್ರೇರಣೆಯಾಗಿದೆ" ಎಂದರು.