ಮಂಗಳೂರು, ಜು.01 (DaijiworldNews/AK): ಮಸೀದಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದ 40 ವರ್ಷದ ವ್ಯಕ್ತಿಯೊಬ್ಬರು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದು, ಅವರ ಕುಟುಂಬವು ದೂರು ದಾಖಲಿಸಿದೆ.



ಕಾಣೆಯಾದ ವ್ಯಕ್ತಿಯನ್ನು ಮಂಜನಾಡಿ ಗ್ರಾಮದ ಮಂಗಳಂತಿ ಕ್ವಾರ್ಟರ್ಸ್ ನಿವಾಸಿ ಮುಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ.
ಮೊಹಮ್ಮದ್ ಆಶ್ರಫ್ ಅವರು ತನ್ನ ಮೊಬೈಲ್ ನ್ನು ಮನೆಯಲ್ಲಿಯೇ ಬಿಟ್ಟು ತನ್ನ ಸ್ಕೂಟರ್ ನಲ್ಲಿ ಉರುಮನೆ ಮಸೀದಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಮಸೀದಿಗೆ ಹೋಗಿರುವುದಿಲ್ಲ. ಈ ವಿಚಾರವನ್ನು ಮಹಮ್ಮದ್ ಆಶ್ರಫ್ ರವರ ಹೆಂಡತಿಯಾದ ಆಸ್ಮಾರವರು ತನಗೆ ದೂರವಾಣಿ ಕರೆ ಮೂಲಕ ತಿಳಿಸಿದ್ದು, ನಂತರ ತಾನು ಉರುಮನೆ ಮಸೀದಿ, ಮೊಹಮ್ಮದ್ ಆಶ್ರಫ್ ಕೆಲಸ ಮಾಡುತ್ತಿದ್ದ ಬೆಳ್ಮ ಗ್ರಾಮದ ಪೋಯಿದಲ್ ತಕ್ವಾ ಮಸೀದಿಯಲ್ಲಿ, ಈ ಕೆಲಸ ಮಾಡುತ್ತಿದ್ದ ಪೂಮಣ್ಣು ಮಸೀದಿ ಕೆ.ಸಿ ರೋಡ್ ತಲಪಾಡಿಯಲ್ಲಿ, ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿ ಹುಡುಕಾಡಿದ್ದು, ಈವರೆಗೂ ಅವರ ಸುಳಿವು ಪತ್ತೆಯಾಗಿರುವುದಿಲ್ಲ ಎಂದು ನಾಸಿರುದ್ದೀನ್.ಕೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಾಣೆಯಾದ ಮೊಹಮ್ಮದ್ ಆಶ್ರಫ್ ರವರನ್ನು ಪತ್ತೆ ಮಾಡಿಕೊಡುವಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಮೇರೆಗೆ ನಾಪತ್ತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ನಾಪತ್ತೆಯಾದ ಮೊಹಮ್ಮದ್ ಅಶ್ರಫ್(40) 5.6 ಅಡಿ ಎತ್ತರವಿದ್ದು, ಎಣ್ಣೆ ಕಪ್ಪು ಮೈಬಣ್ಣ ಸಾಧಾರಣ ಶರೀರ ಹೊಂದಿರುತ್ತಾರೆ. ಅವರು 10 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುತ್ತಾರೆ. ನಾಪತ್ತೆಯಾದ ವೇಳೆ ಬಿಳಿ ಬಣ್ಣದ ಶರ್ಟ್, ಬಿಳಿ ಬಣ್ಣದ ಪಂಚೆ ಹಾಗೂ ಬಿಳಿ ಬಣ್ಣದ ಟೋಪಿ ಧರಿಸಿರುತ್ತಾರೆ. ಕನ್ನಡ, ಬ್ಯಾರಿ, ತುಳು, ಅರೇಬಿಕ್ ಭಾಷೆ ಬಲ್ಲವರಾಗಿರುತ್ತಾರೆ.
ಮೊಹಮ್ಮದ್ ಅಶ್ರಫ್ ಪತ್ತೆಯಾದಲ್ಲಿ ಮಾನ್ಯ ಪೊಲೀಸ್ ಆಯುಕ್ತರ ಕಛೇರಿಯ ಮಂಗಳೂರು ನಗರ ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ 0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆಯ 0824-2220536, 9480802350 ನೇ ಸಂಖ್ಯೆಗೆ ಮಾಹಿತಿ ನೀಡಬೇಕಾಗಿ ಕೊಣಾಜೆ ಪೊಲೀಸ್ ಠಾಣಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.