ಪುತ್ತೂರು, ಜೂ. 30 (DaijiworldNews/AK): ಕಬಕದಲ್ಲಿ ನಿಯಮಬಾಹಿರವಾಗಿ ತಡರಾತ್ರಿ ತೆರೆದುಕೊಂಡಿದ್ದ ಹೋಟೆಲ್ ಅನ್ನು ಮುಚ್ಚುವಂತೆ ಸೂಚನೆ ನೀಡಿದ್ದಕ್ಕೆ ಗ್ರಾಹಕರೊಬ್ಬರು ಪೊಲೀಸರ ವಿರುದ್ಧ ವಾಗ್ವಾದ ನಡೆಸಿದ ಘಟನೆ ಕುರಿತು ಹೋಟೆಲ್ ಮತ್ತು ಗ್ರಾಹಕರ ವಿರುದ್ಧ ಪುತ್ತೂರು ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಇದರ ಜೊತೆಗೆ ಘಟನೆ ನಡೆದು ವಾರ ಕಳೆದರೂ ಮೇಲಾಧಿಕಾರಿಗೆ ಮಾಹಿತಿ ನೀಡದ ಪಿಎಸ್ಐ ಓರ್ವರಿಗೆ ಮೇಲಾಧಿಕಾರಿಗಳು ಎಚ್ಚರಿಕೆ ನೀಡಿರುವ ಕುರಿತು ವರದಿಯಾಗಿದೆ.

ಪೊಲೀಸ್ ಪತ್ರಿಕಾ ಪ್ರಕಟಣೆಯ ಪ್ರಕಾರ, ಜೂನ್ 18 ರಂದು ರಾತ್ರಿ 10.30 ರ ಸುಮಾರಿಗೆ, ಸಹಾಯಕ ಸಬ್-ಇನ್ಸ್ಪೆಕ್ಟರ್ (ಎಎಸ್ಐ) ಚಂದ್ರ ಮತ್ತು ಪೊಲೀಸ್ ಸಿಬ್ಬಂದಿ ಅಸ್ತಮ್ ಅವರು ಪುತ್ತೂರು ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತ ಕಬಕ ಜಂಕ್ಷನ್ ಬಳಿ ಬಂದಾಗ ಮೊಹಮ್ಮದ್ ಆಸಿಫ್ ಒಡೆತನದ ಕೆಎಸ್ ಅಲ್ಫಾ ಕಾರ್ನರ್ ಎಂಬ ಹೋಟೆಲ್ ತೆರೆದಿರುವುದನ್ನು ಗಮನಿಸಿ ನಿಗದಿತ ಸಮಯದೊಳಗೆ ಮುಚ್ಚುವಂತೆ ಹೋಟೆಲ್ ಸಿಬ್ಬಂದಿಗೆ ಸೂಚಿಸಿ ಸಿಬ್ಬಂದಿಗಳು ಅಲ್ಲಿಂದ ತೆರಳಿದ್ದರು.
ನಂತರ, ತಡರಾತ್ರಿ 1.30 ರ ಸುಮಾರಿಗೆ, ಎಎಸ್ಐ ಚಂದ್ರ, ಉಪವಿಭಾಗೀಯ ರಾತ್ರಿ ಗಸ್ತು ಅಧಿಕಾರಿಯಾಗಿದ್ದ ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಪಿಎಸ್ಐ) ಸುರೇಶ್ ಮತ್ತು ಪೊಲೀಸ್ ಸಿಬ್ಬಂದಿ ಸದಸ್ಯ ಅಸ್ತಮ್ ಅವರೊಂದಿಗೆ ಗಸ್ತು ಕರ್ತವ್ಯದ ಸಮಯದಲ್ಲಿ ಅದೇ ಸ್ಥಳಕ್ಕೆ ಬಂದಾಗ ಹೋಟೆಲ್ ಇನ್ನೂ ತೆರೆದಿರುವುದನ್ನು ನೋಡಿ ಅಲ್ಲಿಗೆ ತೆರಳಿ ನಿಯಬಾಹಿರವಾಗಿ ಹೋಟೆಲ್ ತೆರದಿರುವ ಬಗ್ಗೆ ಹೋಟೆಲ್ ಸಿಬ್ಬಂದಿಗಳಿಗೆ ಕಾನೂನು ತಿಳುವಳಿಕೆ ನೀಡಿ ತಕ್ಷಣ ಮುಚ್ಚವಂತೆ ಸೂಚಿಸಿದ್ದರು. ಇದೇ ವೇಳೆ ಸ್ಥಳದಲ್ಲಿದ್ದ ಮೂವರು ಗ್ರಾಹಕರ ಪೈಕಿ ಕಬಕ ನಿವಾಸಿ ಉಜ್ವಲ್ ಕುಮಾರ್ ಪ್ರಭು (45) ಎಂಬ ಆತ ಹೊಟೆಲ್ ಮುಚ್ಚುವುದಕ್ಕೆ ತಕರಾರು ತೆಗೆದು ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು.
ಆಗ ಪಿ.ಎಸ್.ಐ ಸುರೇಶ್ ರವರು ಆತನಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ ಹೋಟೆಲನ್ನು ಮುಚ್ಚಿಸಿ ಅಲ್ಲಿಂದ ತೆರಳಿದರು. ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯು ಸ್ಥಳದಲ್ಲಿ ನಡೆದ ವಾಗ್ವಾದವನ್ನು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ವಾಗ್ವಾದ ಮಾಡಿದ ಉಜ್ವಲ್ ಕುಮಾರ್ ಪ್ರಭು(45) ಎಂಬಾತನ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ 2 ಪ್ರಕರಣಗಳು ದಾಖಲಾಗಿದ್ದು, ಪ್ರಸ್ತುತ ಕರ್ತವ್ಯನಿರತ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣೆಯಲ್ಲಿ ಮುಂಜಾಗ್ರತಾ ಕ್ರಮ ವರದಿ (Preventive Action Report) 127/2026ರಂತೆ ಕಾನೂನುಕ್ರಮ ಕೈಗೊಳ್ಳಲಾಗಿದೆ.
ಪರವಾನಿಗೆ ಅವಧಿ ಮುಗಿದ ಬಳಿಕ ಅನಧೀಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಹೋಟೆಲ್ ನ್ನು ಮುಚ್ಚಿಸಲಾಗಿದೆ. ಮೇಲಾಧೀಕಾರಿಗಳಿಗೆ ಘಟನೆಯ ಬಗ್ಗೆ ಮಾಹಿತಿ ನೀಡದೇ, ಪರಿಸ್ಥಿತಿಯನ್ನು ವೃತ್ತಿಪರವಾಗಿ ನಿರ್ವಹಿಸುವಲ್ಲಿ ವಿಫಲರಾದ ಪಿ.ಎಸ್.ಐ ಸುರೇಶ್ ರವರಿಗೆ ಎಚ್ಚರಿಕೆ ನೀಡಲಾಗಿರುತ್ತದೆ ಎಂದು ಮೇಲಾಧಿಕಾರಿಗಳು ತಿಳಿಸಿದ್ದಾರೆ.