ಮಂಗಳೂರು, ಜೂ. 29 (DaijiworldNews/TA): ನಗರದ ಕುಲಶೇಖರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಹೈಟೆನ್ಶನ್ ವಿದ್ಯುತ್ ಕಂಬವೊಂದಕ್ಕೆ ಬೃಹತ್ ಬಳ್ಳಿಗಳು ಸುತ್ತಿಕೊಂಡು ಪಿರಮಿಡ್ನಂತಹ ಆಕಾರ ಪಡೆದಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.


Pics: Stanly Bantwal
ಕುಲಶೇಖರ ಮೆಸ್ಕಾಂ ಕಚೇರಿಯಿಂದ ಸುಮಾರು ಅರ್ಧ ಮೈಲು ದೂರದಲ್ಲಿರುವ ವೈಟ್ ಡವ್ಸ್ ಸಂಸ್ಥೆಯ ಹಿಂಭಾಗದ ರಸ್ತೆ ಸಮೀಪ ಹಾದು ಹೋಗಿರುವ ಹೈಟೆನ್ಶನ್ ವಿದ್ಯುತ್ ತಂತಿಯ ಕಂಬಕ್ಕೆ ದಟ್ಟವಾಗಿ ಬೆಳೆದಿರುವ ಬಳ್ಳಿಗಳು ಸಂಪೂರ್ಣ ಕಂಬವನ್ನೇ ಆವರಿಸಿವೆ. ಹಲವು ತಿಂಗಳುಗಳಿಂದ ಈ ಸ್ಥಿತಿ ಮುಂದುವರಿದಿದ್ದರೂ ಮೆಸ್ಕಾಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಮೆಸ್ಕಾಂ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿ ಜನವಸತಿ ಹೆಚ್ಚಿದ್ದು, ವಿದ್ಯುತ್ ತಂತಿಗಳಿಗೆ ಬಳ್ಳಿಗಳು ತಾಗಿರುವುದರಿಂದ ಶಾರ್ಟ್ ಸರ್ಕ್ಯೂಟ್ ಅಥವಾ ತಂತಿ ತುಂಡಾಗಿ ಕೆಳಗೆ ಬೀಳುವ ಅಪಾಯ ಹೆಚ್ಚಾಗಿದೆ. ಇಂತಹ ಅವಘಡ ಸಂಭವಿಸಿದರೆ ರಸ್ತೆ ಬಳಕೆದಾರರು ಹಾಗೂ ಸುತ್ತಮುತ್ತಲಿನ ನಿವಾಸಿಗಳ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿದೆ.
ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್ಗಳು ಹಾಗೂ ಹೈಟೆನ್ಷನ್ ಮಾರ್ಗಗಳ ಸುತ್ತಮುತ್ತ ಬೆಳೆದಿರುವ ಗಿಡ-ಗಂಟಿಗಳನ್ನು ನಿಯಮಿತವಾಗಿ ತೆರವುಗೊಳಿಸುವುದು ಮೆಸ್ಕಾಂ ಸಿಬ್ಬಂದಿಯ ಜವಾಬ್ದಾರಿಯಾಗಿದೆ. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಳ್ಳಿಗಳು ಬೆಳೆದಿದ್ದರೂ ಅವುಗಳನ್ನು ತೆರವುಗೊಳಿಸದಿರುವುದು ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸಂಭವನೀಯ ಅಪಾಯವನ್ನು ತಪ್ಪಿಸಲು ಮೆಸ್ಕಾಂ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ವಿದ್ಯುತ್ ಕಂಬಕ್ಕೆ ಸುತ್ತಿಕೊಂಡಿರುವ ಬಳ್ಳಿಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.