ಬಂಟ್ವಾಳ, ಜೂ. 29 (DaijiworldNews/TA): ಕೆಎಸ್ಆರ್ಟಿಸಿ ಬಸ್ ಚಾಲಕನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮಹಿಳೆಯೊಬ್ಬರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೇ ಘಟನೆಗೆ ಸಂಬಂಧಿಸಿ ಮಹಿಳೆಯು ಕೂಡ ಬಸ್ ಚಾಲಕನ ವಿರುದ್ಧ ಪ್ರತಿದೂರು ನೀಡಿದ್ದಾರೆ.

ಕಡೂರಿನಿಂದ ಉಜಿರೆ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಬಂಟ್ವಾಳ ಬೈಪಾಸ್ ಪ್ರದೇಶ ತಲುಪಿದ ವೇಳೆ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಬಸ್ ಚಾಲಕ ವಸಂತ್ ಕುಮಾರ್ ಅವರು ನೀಡಿದ ದೂರಿನ ಪ್ರಕಾರ, ಬಿ.ಸಿ.ರೋಡ್ ಸಮೀಪ ಬಸ್ ನಿಲ್ಲಿಸಿದ್ದ ಸಂದರ್ಭದಲ್ಲಿ ಕಾರೊಂದನ್ನು ಬಸ್ಗೆ ಅಡ್ಡವಾಗಿ ನಿಲ್ಲಿಸಿ ಮಹಿಳೆಯೊಬ್ಬರು ತಮ್ಮೊಂದಿಗೆ ವಾಗ್ವಾದ ನಡೆಸಿದ್ದಾರೆ.
ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಂದೆಡೆ, ಮಹಿಳೆಯು ನೀಡಿದ ಪ್ರತಿದೂರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬಸ್ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಆರೋಪಿಸಿದ್ದಾರೆ. ಎರಡೂ ದೂರುಗಳನ್ನು ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.