ಮಂಗಳೂರು, ಜೂ. 28 (DaijiworldNews/TA): ಉಳಾಯಿಬೆಟ್ಟು- ಮಂಗಳೂರು ಪ್ರಧಾನ ರಸ್ತೆಯ ಸಾಲೆ ಮೇಲ್ಮನೆ ಎಂಬಲ್ಲಿ ನಿರ್ಮಾಣವಾಗುತ್ತಿರುವ ನೂತನ ಸೇತುವೆಯ ಬಾಕಿಯುಳಿದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿ ಶುಕ್ರವಾರದಿಂದ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಯಿತು.

ಪರಾರಿ- ಉಳಾಯಿಬೆಟ್ಟು ಸೇತುವೆ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಆರಂಭವಾಗಿ 8 ತಿಂಗಳುಗಳೇ ಕಳೆದಿತ್ತು. ನಿಧಾನಗತಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಜನತೆ ಸಂಕಷ್ಟ ಎದುರಿಸಿದ್ದರು.
ಉಳಾಯಿಬೆಟ್ಟು- ಮಂಗಳೂರು ಸಂಪರ್ಕಕ್ಕೆ ನಿರ್ಮಾಣ ಮಾಡಲಾಗಿದ್ದ ತಾತ್ಕಾಲಿಕ ರಸ್ತೆ ಕೆಸರುಮಯವಾಗಿ ಸಾರ್ವಜನಿಕರು ತೊಂದರೆಗೀಡಾಗಿದ್ದರು. ಸದ್ಯ ನೂತನ ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಜನತೆ ಸಹಜವಾಗಿಯೇ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.