ಉಡುಪಿ, ಜೂ. 28 (DaijiworldNews/TA): ಕಟಪಾಡಿಯ ಉದ್ಯಾವರ ಬಬ್ಬುಸ್ವಾಮಿ ದೈವಸ್ಥಾನದ ಬಳಿ ಸ್ಕೂಟರ್ ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಮಂಗಳೂರಿನ ಉರ್ವ ಬೋಳೂರು ಅಶೋಕ್ ನಗರದ ನಿವಾಸಿ ಮೋನಿಷ್ ಅಂಚನ್ (42) ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದ ಘಟನೆ ಜೂ.27ರ ಶನಿವಾರ ಸಂಭವಿಸಿದೆ.

ಘಟನೆಯಲ್ಲಿ ಸಹಸವಾರ ಗೀತೇಶ್ ಕಮಲಾಕ್ಷ ಸಾಲಿಯಾನ್ ಗಾಯಗೊಂಡಿದ್ದರು. ಉಡುಪಿ ಮರ್ಣೆಯಲ್ಲಿರುವ ಅತ್ತೆ ಮನೆಗೆ ಬಂದಿದ್ದ ಅವರು ಪತ್ನಿಯ ಅಣ್ಣ ಗೀತೇಶ್ ಜತೆ ಸ್ಕೂಟರ್ ನಲ್ಲಿ ಜೂ.26ರ ರಾತ್ರಿ ಮನೆಯಿಂದ ತೆರಳಿದ್ದರು. ಉದ್ಯಾವರ ಬಬ್ಬುಸ್ವಾಮಿ ದೈವಸ್ಥಾನದ ಮುಂಭಾಗ ತಲುಪುತ್ತಿದ್ದಂತೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರೊಂದು ಸ್ಕೂಟರಿಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತದ ಸಂದರ್ಭ ಇಬ್ಬರೂ ರಸ್ತೆಗೆ ಬಿದ್ದಿದ್ದು, ಸಹಸವಾರ ಗೀತೇಶ್ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಸವಾರ ಮೋನಿಶ್ ಅಂಚನ್ ತಲೆಗೆ ಗಂಭೀರ ಗಾಯಗೊಂಡಿದ್ದರು. ಸ್ಥಳೀಯರು ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸವಾರ ಮೋನಿಷ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.