ಉಡುಪಿ, ಜೂ. 27 (DaijiworldNews/TA): ಜಿಲ್ಲೆಯಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಹೊಸ ಪ್ರಯತ್ನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಕಳೆದ ವರ್ಷ ಆರಂಭಿಸಿದ ಗೌಪ್ಯ ಕ್ಯುಆರ್ಕೋಡ್ ವ್ಯವಸ್ಥೆ ಮೂಲಕ ಜನರು ತಮ್ಮ ಗುರುತು ಬಹಿರಂಗಪಡಿಸದೆ ಮಾದಕ ವಸ್ತುಗಳ ಬಳಕೆ ಮತ್ತು ಸಾಗಾಟದ ಬಗ್ಗೆ ಮಾಹಿತಿ ನೀಡಬಹುದು. ಕ್ಯುಆರ್ಕೋಡ್ ಸ್ಕ್ಯಾನ್ ಮಾಡಿದ ಬಳಿಕ ಸುಮಾರು 15 ಪ್ರಶ್ನೆಗಳಿಗೆ ಉತ್ತರಿಸಿ, ಫೋಟೋ ಹಾಗೂ ವಿಡಿಯೋಗಳನ್ನೂ ಅಪ್ಲೋಡ್ ಮಾಡುವ ಅವಕಾಶ ಇದೆ.

ಈವರೆಗೆ ಬಂದ ಮಾಹಿತಿಯ ಆಧಾರದಲ್ಲಿ 193 ಪ್ರಕರಣಗಳು ದಾಖಲಾಗಿದ್ದು, ಎನ್ಡಿಪಿಎಸ್ ಪ್ರಕರಣಗಳ ಪೈಕಿ ಶೇ.60-70ರಷ್ಟು ಪ್ರಕರಣಗಳು ಇದೇ ಮಾಹಿತಿಯಿಂದ ಪತ್ತೆಯಾಗಿವೆ. ಮಾಹಿತಿ ದೃಢೀಕರಣದ ಬಳಿಕವೇ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. 2023ರಿಂದ 2026ರವರೆಗೆ ಸಾಗಾಟ ಮತ್ತು ಸೇವನೆಗೆ ಸಂಬಂಧಿಸಿದ ಒಟ್ಟು 639 ಪ್ರಕರಣಗಳಲ್ಲಿ 767 ಆರೋಪಿಗಳನ್ನು ಬಂಧಿಸಲಾಗಿದೆ.
ಈ ಅವಧಿಯಲ್ಲಿ 130 ಕೆ.ಜಿ.ಗಿಂತ ಹೆಚ್ಚು ಗಾಂಜಾ, 458 ಗ್ರಾಂಕ್ಕೂ ಹೆಚ್ಚು ಎಂಡಿಎಂಎ, 271 ಗ್ರಾಂ ಮೆಥಾಂಫೆಟಮೈನ್, ಜೊತೆಗೆ ಚರಸ್ ಹಾಗೂ ಎಲ್ಎಸ್ಡಿ ಸ್ಟ್ರಿಪ್ಸ್ ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಪ್ರಕಾರ, ಈ ಕ್ಯುಆರ್ಕೋಡ್ ವ್ಯವಸ್ಥೆ ಪೊಲೀಸರಿಗೆ ಪ್ರಮುಖ ಮಾಹಿತಿಯ ಮೂಲವಾಗಿದ್ದು, ಮುಂದಿನ ದಿನಗಳಲ್ಲಿ ಪಾರ್ಕ್ಗಳು ಮತ್ತು ಬೀಚ್ಗಳಲ್ಲೂ ಇದನ್ನು ಅಳವಡಿಸಿ ಜನಜಾಗೃತಿ ಮೂಡಿಸಲಾಗುವುದು.