ಮಂಗಳೂರು, ಜೂ. 27 (DaijiworldNews/TA): ಎಲ್ ನಿನೊ ಪರಿಣಾಮದಿಂದ ರಾಜ್ಯದಲ್ಲಿ ಈ ಬಾರಿ ಮುಂಗಾರು ದುರ್ಬಲವಾಗುವ ಸಾಧ್ಯತೆ ಇದೆ. ಇದರ ಪರಿಣಾಮ ಕೃಷಿ ಮಾತ್ರವಲ್ಲ, ಕರಾವಳಿಯ ಮೀನುಗಾರಿಕೆ ವಲಯದ ಮೇಲೂ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಪ್ರತಿ ವರ್ಷ ಜೂನ್ 1ರಿಂದ ಜುಲೈ 31ರವರೆಗೆ ಮೀನುಗಳ ಸಂತಾನೋತ್ಪತ್ತಿಗಾಗಿ ಮೀನುಗಾರಿಕೆಗೆ ನಿಷೇಧ ವಿಧಿಸಲಾಗುತ್ತದೆ. ಈ ಅವಧಿಯಲ್ಲಿ ಪಶ್ಚಿಮಘಟ್ಟದಿಂದ ಹರಿದು ಬರುವ ಸಿಹಿ ನೀರು ಸಮುದ್ರ ಸೇರುವುದರಿಂದ ಮೀನುಗಳ ಸಂತಾನೋತ್ಪತ್ತಿಗೆ ಅನುಕೂಲವಾಗುತ್ತದೆ. ಆದರೆ ಈ ಬಾರಿ ಮಳೆ ಕೊರತೆಯಿಂದ ಸಿಹಿ ನೀರು ಕಡಲಿಗೆ ಸಮರ್ಪಕವಾಗಿ ಹರಿದು ಬರುತ್ತಿಲ್ಲ. ಇದರ ಜೊತೆಗೆ ತ್ಯಾಜ್ಯ ನೀರು ಹೆಚ್ಚು ಪ್ರಮಾಣದಲ್ಲಿ ಸಮುದ್ರ ಸೇರುವ ಸಾಧ್ಯತೆ ಇದ್ದು, ಮೀನುಗಳ ಸಂತಾನೋತ್ಪತ್ತಿಗೆ ಇದು ದೊಡ್ಡ ಹೊಡೆತವಾಗಲಿದೆ.
ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಎಚ್.ಎನ್. ಆಂಜನೇಯಪ್ಪ ಅವರ ಪ್ರಕಾರ, ಎಲ್ನೊ ಪರಿಣಾಮದಿಂದ ಸಮುದ್ರದ ನೀರು ಅಸಾಮಾನ್ಯವಾಗಿ ಬೆಚ್ಚಗಾಗುತ್ತಿದೆ. ಸಾಮಾನ್ಯವಾಗಿ ಕರಾವಳಿಗೆ ವಲಸೆ ಬರುವ ಮೀನುಗಳು ಈ ಬಾರಿ ಬರದೇ ಇರಬಹುದು. ಅಲ್ಲದೆ, ಈಗಿರುವ ಮೀನುಗಳೂ ಬೇರೆ ಪ್ರದೇಶಗಳಿಗೆ ವಲಸೆ ಹೋಗುವ ಅಪಾಯವಿದ್ದು, ಇದರಿಂದ ಮೀನುಗಾರಿಕೆಯಲ್ಲಿ ಮತ್ತಷ್ಟು ಕುಸಿತ ಉಂಟಾಗಬಹುದು.
ಭಾರತದ ಮೀನುಗಾರಿಕೆ ರಫ್ತು ಮೌಲ್ಯ ವರ್ಷಕ್ಕೆ ರೂ. 46,666 ಕೋಟಿಗೂ ಹೆಚ್ಚು. ಕರ್ನಾಟಕದಲ್ಲಿ ಈ ವಲಯದಿಂದ ರೂ. 6,996 ಕೋಟಿ ಆದಾಯ ಲಭಿಸುತ್ತಿದ್ದು, 9.62 ಲಕ್ಷ ಟನ್ ಮೀನು ಉತ್ಪಾದನೆ ಆಗುತ್ತದೆ. ದೇಶದ ಒಟ್ಟು ಮೀನು ಉತ್ಪಾದನೆಯಲ್ಲಿ ರಾಜ್ಯದ ಪಾಲು 4.27 ಶೇಕಡಾ. ಆದರೆ ಈ ಬಾರಿ ಮಳೆ ಕೊರತೆಯಿಂದ ಮೀನು ಉತ್ಪಾದನೆ ಹಾಗೂ ಮೀನುಗಾರರ ಆದಾಯ ಎರಡೂ ಕುಸಿಯುವ ಸಾಧ್ಯತೆ ಇದೆ.