ಪುತ್ತೂರು, ಜೂ. 26 (DaijiworldNews/TA): ನಗರದ ಯುವ ಚಿತ್ರಕಲಾವಿದ ರಾಮ್ ಪ್ರಸಾದ್ ಕೆ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು MyGov ವೇದಿಕೆಯಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ದೇಶದಾದ್ಯಂತ ಭಾಗವಹಿಸಿದ್ದ 7,233 ಕಲಾವಿದರನ್ನು ಹಿಂದಿಕ್ಕಿ ಅವರ ವಿನ್ಯಾಸ ಆಯ್ಕೆಯಾಗಿದೆ.


ಕೇಂದ್ರ ಸರ್ಕಾರದ 'ವಿಕಸಿತ ಭಾರತ್ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)' ಯೋಜನೆಗೆ ರಾಮ್ ಪ್ರಸಾದ್ ವಿನ್ಯಾಸಗೊಳಿಸಿದ ಲೋಗೋವನ್ನು ಅಧಿಕೃತವಾಗಿ ಬಳಸಲಾಗುತ್ತಿದೆ. ಇದು ಮರುನಾಮಕರಣಗೊಂಡ ಮನರೇಗಾ ಯೋಜನೆಯ ಹೊಸ ಗುರುತಾಗಿ ಕಾರ್ಯನಿರ್ವಹಿಸಲಿದೆ.
ಕೊನೆಯ ಕ್ಷಣದಲ್ಲಿ ಅಪ್ಲೋಡ್ ಮಾಡಿದ ವಿನ್ಯಾಸಕ್ಕೆ ರಾಷ್ಟ್ರೀಯ ಮನ್ನಣೆ : ಸ್ಪರ್ಧೆಯ ಗಡುವು ಮಾರ್ಚ್ 30ಕ್ಕೆ ಅಂತ್ಯವಾಗಬೇಕಿತ್ತು. ಈ ನಡುವೆ ರಾಮ್ ಪ್ರಸಾದ್ ಯೋಜನೆಯ ಉದ್ದೇಶವನ್ನು ಅಧ್ಯಯನ ಮಾಡಿ 20ಕ್ಕೂ ಹೆಚ್ಚು ಲೋಗೋ ವಿನ್ಯಾಸಗಳನ್ನು ಸಿದ್ಧಪಡಿಸಿದ್ದರೂ ಯಾವುದೂ ತೃಪ್ತಿ ನೀಡಿರಲಿಲ್ಲ.
ಈಗಾಗಲೇ ಸಾವಿರಾರು ಮಂದಿ ಸ್ಪರ್ಧೆಗೆ ಹೆಸರು ನೋಂದಾಯಿಸಿರುವುದನ್ನು ಕಂಡು ಅವರು ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದರು. ಆದರೆ ಏಪ್ರಿಲ್ 1ರಂದು ಸ್ಪರ್ಧೆಯ ಗಡುವನ್ನು ನಾಲ್ಕು ದಿನ ವಿಸ್ತರಿಸಿರುವುದು ಅವರಿಗೆ ಹೊಸ ಅವಕಾಶ ನೀಡಿತು. ಮತ್ತೆ ಹೊಸ ಉತ್ಸಾಹದಿಂದ ಕೆಲಸ ಆರಂಭಿಸಿದ ಅವರು ಅಂತಿಮವಾಗಿ ತೃಪ್ತಿಕರ ವಿನ್ಯಾಸವನ್ನು ಸಿದ್ಧಪಡಿಸಿ ಏಪ್ರಿಲ್ 4ರಂದು ಕೊನೆಯ ಕ್ಷಣದಲ್ಲಿ ಆನ್ಲೈನ್ ಮೂಲಕ ಸಲ್ಲಿಸಿದರು.
ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ರಾಮ್ ಪ್ರಸಾದ್ ಶಾಲಾ ಮತ್ತು ಕಾಲೇಜು ಹಂತದಲ್ಲೇ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಮಂಗಳೂರಿನ ಮಹಾಲಾಸ ಕಲಾ ಶಾಲೆಯಲ್ಲಿ ಕಲಾ ಶಿಕ್ಷಣ ಪಡೆದಿರುವ ಅವರು ಪ್ರಸ್ತುತ ಗ್ರಾಫಿಕ್ ಡಿಸೈನಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಸಾಧನೆಗಾಗಿ ಕೇಂದ್ರ ಸರ್ಕಾರ ರಾಮ್ ಪ್ರಸಾದ್ ಅವರನ್ನು ರೂ.50,000 ನಗದು ಬಹುಮಾನ ನೀಡಿ ಗೌರವಿಸಲಿದೆ. ಇದೇ ತಿಂಗಳ ಜೂನ್ 29ರಂದು ನವದೆಹಲಿಯಲ್ಲಿ ಅವರ ವಿನ್ಯಾಸಗೊಳಿಸಿದ ಲೋಗೋವನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಲೋಗೋವನ್ನು VB-GRAMG ಯೋಜನೆಯ ಅಧಿಕೃತ ದಾಖಲೆಗಳು, ಪ್ರಚಾರ ಸಾಮಗ್ರಿಗಳು ಹಾಗೂ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಬಳಸಲಾಗಲಿದ್ದು, ಪುತ್ತೂರಿನ ಈ ಯುವ ಕಲಾವಿದನ ಸಾಧನೆ ರಾಜ್ಯದ ಹೆಮ್ಮೆಯ ಕ್ಷಣವಾಗಿದೆ.