ಧರ್ಮಸ್ಥಳ, ಜೂ. 26 (DaijiworldNews/TA): ದೆಹಲಿ ಪ್ರವಾಸ ಮುಗಿಸಿಕೊಂಡು ನೇರವಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶುಕ್ರವಾರ ಬೆಳಗ್ಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಅವರೊಂದಿಗೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹಾಗೂ ಕರಾವಳಿ ಭಾಗದ ಬಿಜೆಪಿ ಶಾಸಕರು ಸಹ ಉಪಸ್ಥಿತರಿದ್ದರು.

ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿದ್ದ ಎನ್ನಲಾದ ಅಡ್ಡ ಮತದಾನ ಪ್ರಕರಣದ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಶಾಸಕರಿಂದ 'ಆಣೆ-ಪ್ರಮಾಣ' ಮಾಡಿಸುವ ಕುರಿತು ಮೊದಲು ಚರ್ಚೆಯಾಗಿತ್ತು. ಆದರೆ ಈ ನಿರ್ಧಾರಕ್ಕೆ ಪಕ್ಷದ ಹಿರಿಯ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ಕೈಬಿಡಲಾಗಿತ್ತು.
ಈ ಬೆಳವಣಿಗೆಯ ಬಳಿಕ ವಿಜಯೇಂದ್ರ ಅವರ ಧರ್ಮಸ್ಥಳ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಡ್ಡ ಮತದಾನ ಪ್ರಕರಣದಿಂದ ಉಂಟಾದ ಭಿನ್ನಾಭಿಪ್ರಾಯಗಳ ನಡುವೆ ಅವರು ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿರುವುದು ಗಮನ ಸೆಳೆದಿದೆ.
ಮೂಲಗಳ ಪ್ರಕಾರ, ಅಡ್ಡ ಮತದಾನ ಮಾಡಿದವರ ಕುರಿತು ಸತ್ಯಾಸತ್ಯತೆ ತಿಳಿಯುವ ಉದ್ದೇಶದಿಂದ ಧರ್ಮಸ್ಥಳದಲ್ಲಿ ಸಭೆ ನಡೆಸುವ ಆಲೋಚನೆ ಇತ್ತು. ಆದರೆ ಪವಿತ್ರ ಕ್ಷೇತ್ರದಲ್ಲಿ ರಾಜಕೀಯ ಸಭೆ ಹಾಗೂ ಆಣೆ-ಪ್ರಮಾಣ ನಡೆಸುವುದು ಸೂಕ್ತವಲ್ಲ ಎಂದು ಪಕ್ಷದ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದರು.
ಸಭೆ ರದ್ದಾದ ನಂತರ ಈ ಬೆಳವಣಿಗೆಗೆ ಸಂಬಂಧಿಸಿ ಕೆಲ ನಾಯಕರು ವಿಜಯೇಂದ್ರ ಅವರನ್ನು ಟೀಕಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಶಾಸಕರನ್ನು ಕರೆತರುವ ಬದಲು ವಿಜಯೇಂದ್ರ ಅವರು ವೈಯಕ್ತಿಕವಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥನ ದರ್ಶನ ಪಡೆದಿದ್ದಾರೆ. ವಿಜಯೇಂದ್ರ ಅವರ ಈ ಭೇಟಿ ಧಾರ್ಮಿಕವಾಗಿದ್ದರೂ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದೆ.