ಮಂಗಳೂರು, ಜೂ. 25 (DaijiworldNews/AA): ಬಾಲಿವುಡ್ ಸೂಪರ್ಸ್ಟಾರ್, ಬಾಲಿವುಡ್ ಬಾದ್ಷಾ ಶಾರುಖ್ ಖಾನ್, ರೋಹನ್ ಕಾರ್ಪೊರೇಷನ್ ಆಯೋಜಿಸಿರುವ ಬಹುನಿರೀಕ್ಷಿತ ಕಾರ್ಪೊರೇಟ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಸಂಜೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.








ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ, ಬಾಲಿವುಡ್ನ ಶಾರುಖ್ ಖಾನ್ ಅವರನ್ನು ಸ್ವಾಗತಿಸಲು ಅಭಿಮಾನಿಗಳ ದಂಡೇ ಸೇರಿತ್ತು. ತಮ್ಮ ಅಭಿಮಾನಿಗಳ ಪ್ರೀತಿಯನ್ನು ಸ್ವೀಕರಿಸಿದ ಶಾರುಖ್ ಖಾನ್, ವಿಮಾನ ನಿಲ್ದಾಣದ ಹೊರಗೆ ನೆರೆದಿದ್ದ ಅಭಿಮಾನಿಗಳಿಗೆ ಕೈಬೀಸಿ, ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಪ್ರೀತಿ ವ್ಯಕ್ತಪಡಿಸಿದರು. ನಂತರ ಕಾರಿನಲ್ಲಿ ನಿಗದಿತ ಸ್ಥಳಕ್ಕೆ ತೆರಳಿದರು.
ಕರಾವಳಿ ಕರ್ನಾಟಕದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಷನ್ ಆಯೋಜಿಸಿರುವ 'ಆನ್ ಈವ್ನಿಂಗ್ ವಿತ್ ಶಾರುಖ್ ಖಾನ್' ಎಂಬ ವಿಶೇಷ ಕಾರ್ಯಕ್ರಮದ ಅತಿಥಿಯಾಗಿ ಅವರು ನಗರಕ್ಕೆ ಆಗಮಿಸಿದ್ದಾರೆ. ಅಡ್ಯಾರ್ ಗಾರ್ಡನ್ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಸಂಜೆ 4 ಗಂಟೆಯಿಂದಲೇ ಪ್ರವೇಶಾವಕಾಶ ನೀಡಲಾಗಿತ್ತು.
ಈ ಹೈ-ಪ್ರೊಫೈಲ್ ಕಾರ್ಯಕ್ರಮದಲ್ಲಿ ಉದ್ಯಮಿಗಳು, ಕೈಗಾರಿಕಾ ಕ್ಷೇತ್ರದ ದಿಗ್ಗಜರು, ಗಣ್ಯರು ಮತ್ತು ಮೊದಲೇ ನೋಂದಾಯಿಸಿಕೊಂಡ ಸಾರ್ವಜನಿಕರು ಭಾಗವಹಿಸಿದ್ದಾರೆ. ಕಾರ್ಯಕ್ರಮದ ಅಚ್ಚುಕಟ್ಟಾದ ನಿರ್ವಹಣೆಗೆ ಅನುಕೂಲವಾಗುವಂತೆ ಆಯೋಜಕರು ನೋಂದಣಿಯನ್ನು ಕಡ್ಡಾಯಗೊಳಿಸಿದ್ದು, ಮಾನ್ಯತೆ ಪಡೆದ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ರೋಹನ್ ಕಾರ್ಪೊರೇಷನ್ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್ ಮೊಂತೆರೋ, "ಶಾರುಖ್ ಖಾನ್ ಅವರನ್ನು ಮಂಗಳೂರಿಗೆ ಸ್ವಾಗತಿಸುತ್ತಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ಕ್ಷಣವಾಗಿದೆ. ಅತಿಥಿಗಳು ಮತ್ತು ಭಾಗವಹಿಸುವವರಿಗೆ ಇದು ಸ್ಮರಣೀಯ ಅನುಭವವಾಗಲಿದೆ ಎಂದು ನಾವು ನಂಬಿದ್ದೇವೆ" ಎಂದರು.
ರೋಹನ್ ಕಾರ್ಪೊರೇಷನ್ನ ನಿರ್ದೇಶಕ ಡಿಯೋನ್ ಮೊಂತೆರೋ ಮಾತನಾಡಿ, "ಮಂಗಳೂರಿನಲ್ಲಿ ನಡೆಯುತ್ತಿರುವ ಅತಿದೊಡ್ಡ ಕಾರ್ಪೊರೇಟ್ ಕಾರ್ಯಕ್ರಮಗಳಲ್ಲಿ ಇದೂ ಒಂದು. ಈ ಕಾರ್ಯಕ್ರಮವು ನಮ್ಮ ಸಂಸ್ಥೆಗೆ ಮತ್ತು ನಗರಕ್ಕೆ ಒಂದು ಮೈಲಿಗಲ್ಲಾಗಿದೆ. ಕಾರ್ಯಕ್ರಮ ಯಶಸ್ವಿಯಾಗಲು ಸಂಬಂಧಪಟ್ಟ ಇಲಾಖೆಗಳು ಮತ್ತು ಸಾರ್ವಜನಿಕರ ಸಹಕಾರವನ್ನು ಕೋರುತ್ತೇವೆ" ಎಂದು ತಿಳಿಸಿದರು.
ಈ ಸೂಪರ್ಸ್ಟಾರ್ನ ಭೇಟಿಯಿಂದ ಕರಾವಳಿ ಭಾಗದಾದ್ಯಂತ ಭಾರೀ ಉತ್ಸಾಹ ಮನೆಮಾಡಿದೆ. ಈ ಕಾರ್ಯಕ್ರಮವು ರಾಷ್ಟ್ರಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಮಂಗಳೂರು ನಗರ ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ.