ಬಂಟ್ವಾಳ, ಜೂ. 25 (DaijiworldNews/TA): ಟ್ರಾಫಿಕ್ ಎಸ್. ಐ.ಆದರ್ಶ್ ನೇತೃತ್ವದಲ್ಲಿ ಟ್ರಾಫಿಕ್ ಪೊಲೀಸರ ತಂಡ ಬಂಟ್ವಾಳದ ಬಿ.ಸಿ.ರೋಡಿನ ಹೃದಯಭಾಗದಲ್ಲಿ ಟ್ರಾಫಿಕ್ ನಿಯಮ ಪಾಲಿಸದ ವಾಹನ ಸವಾರರಿಗೆ ದಂಡ ವಿಧಿಸಿದ್ದಲ್ಲದೆ, ಟ್ರಾಫಿಕ್ ಕಿರಿಕಿರಿ ಉಂಟು ಮಾಡುತ್ತಿದ್ದ ಬಸ್ ಹಾಗೂ ರಿಕ್ಷಾ ಚಾಲಕರಿಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.



ಬಿ.ಸಿ.ರೋಡಿನ ಬಸ್ ನಿಲ್ದಾಣದ ಬಳಿ ಗ್ರಾಮೀಣ ಭಾಗಕ್ಕೆ ತೆರಳುವ ಖಾಸಗಿ ಬಸ್ ಹಾಗೂ ಗ್ರಾಮೀಣ ಪರ್ಮಿಟ್ ಹೊಂದಿರುವ ರಿಕ್ಷಾ ಚಾಲಕರು ರಿಕ್ಷಾಗಳನ್ನು ನಿಲ್ಲಿಸಿ , ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದ್ದಾರೆ ಎಂಬ ಆರೋಪಗಳು ಅನೇಕ ದಿನಗಳಿಂದ ಕೇಳಿ ಬಂದಿತ್ತು. ಈ ದಿನ ಸ್ವತಹ ಟ್ರಾಫಿಕ್ ಎಸ್.ಐ.ಆದರ್ಶ್ ಅವರು ಫೀಲ್ಡಿಗಿಳಿದು ಬಸ್ ಗಳ ಚಾಲಕರಿಗೆ ಹಾಗೂ ರಿಕ್ಷಾ ಚಾಲಕರಿಗೆ ಕ್ಲಾಸ್ ತೆಗೆದುಕೊಂಡಿದ್ದಲ್ಲದೆ, ಪ್ರತೀ ವಾಹನಗಳ ದಾಖಲೆಗಳನ್ನು ಪರಿಶೀಲಿಸಿ, ನಿಯಮ ಪಾಲನೆಯ ಬಿಸಿ ಮುಟ್ಟಿಸಿದ್ದಾರೆ. ಇದರ ಜೊತೆ ಒಟ್ಟು 25 ಪ್ರಕರಣಗಳನ್ನು ವಿವಿಧ ವಾಹನಗಳಿಗೆ ಬೇರೆ ಕಾರಣಗಳಿಗಾಗಿ ದಾಖಲು ಮಾಡಿದ್ದಾರೆ.
ಅದರಲ್ಲಿ 13 ಪ್ರಕರಣಗಳು ಕರ್ಕಶ ಹಾರ್ನ್ ಗಳನ್ನು ಅಳವಡಿಸಿದ ಕಾರಣಕ್ಕೆ ಉಳಿದಂತೆ ನಂಬರ್ ಪ್ಲೇಟ್ ಇಲ್ಲದ ವಾಹನಗಳು ಹಾಗೂ ಕರ್ಕಶ ಶಬ್ದ ಮಾಡುವ ವಾಹನಗಳ ಸೈಲೆನ್ಸ್ ರ್ ಗಳನ್ನು ಹೊಂದಿರುವ ವಾಹನಗಳ ಮೇಲೆ ಪ್ರಕರಣ ದಾಖಲು ಮಾಡಿರುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಬಿ.ಸಿ.ರೋಡಿನ ಕೈಕಂಬದಲ್ಲೂ ಇದೇ ಮಾದರಿಯ ಕಾರ್ಯಾಚರಣೆ ಮಾಡುವಂತೆ ಸಾರ್ವಜನಿಕ ವಲಯದಿಂದ ಒತ್ತಾಯಗಳು ಕೇಳಿ ಬಂದಿದ್ದು, ಇಲ್ಲಿ ಟ್ರಾಫಿಕ್ ರೂಲ್ ಫಾಲೋ ಮಾಡದೆ ಅಡ್ಡಾದಿಡ್ಡಿ ವಾಹನಗಳ ಚಾಲನೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.