ಮಂಗಳೂರು, ಜೂ. 24 (DaijiworldNews/TA): ನಗರದ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 73ರ ಬಿಕ್ಕರ್ನಕಟ್ಟೆ ಮೇಲ್ಸೇತುವೆಯ ಸರ್ವಿಸ್ ರಸ್ತೆ ತ್ಯಾಜ್ಯ ಸುರಿಯುವ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಗೊಂಡಿದೆ. ಅಸಮರ್ಪಕ ನಿರ್ವಹಣೆಯಿಂದ ರಸ್ತೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ನಡೆದಾಡಿಕೊಂಡು ಹೋಗುವವರು ಮೂಗು ಮುಚ್ಚಿ ಹೋಗುವಂತಾಗಿದೆ.

ಹಲವು ಸಮಯದಿಂದ ರಸ್ತೆಯಿಡೀ ತ್ಯಾಜ್ಯ ಎಸೆಯುವ ತಾಣವಾಗಿದ್ದು, ಪಾಲಿಕೆಯ ವಾರ್ಡ್ ಕಾರ್ಮಿಕರು ತೆರವುಗೊಳಿಸಿದರೂ ಮತ್ತೆ ಮತ್ತೆ ಬಂದು ತ್ಯಾಜ್ಯ ಬೀಳುತ್ತಿದೆ. ಕೆಲವು ಕಡೆಗಳಲ್ಲಿ ಅರ್ಧ ರಸ್ತೆಯವರೆಗೂ ತ್ಯಾಜ್ಯ ವ್ಯಾಪಿಸಿರುತ್ತದೆ. ಕಾಗದಗಳು, ಪ್ಲಾಸ್ಟಿಕ್ಗಳು, ತ್ಯಾಜ್ಯ ವಸ್ತುಗಳು ರಸ್ತೆಯಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಪ್ರಸ್ತುತ ಮಳೆಯು ಸುರಿಯುತ್ತಿರುವುದರಿಂದ ತ್ಯಾಜ್ಯದ ಕೊಳೆತ ನೀರು ಕೂಡ ರಸ್ತೆಯಲ್ಲೇ ಹರಿಯುತ್ತಿರುತ್ತದೆ. ಕೊಳೆತ - ಕೊಳೆಯದ ತ್ಯಾಜ್ಯಗಳೆಲ್ಲವೂ ಹೊಲಸಾಗಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಉಂಟಾಗಿದೆ. ರಸ್ತೆಯ ಉದ್ದಕ್ಕೂ ಸುಮಾರು 50 ಮೀ. ನಷ್ಟು ದೂರದ ವರೆಗೆ ತ್ಯಾಜ್ಯವನ್ನು ಎಸೆಯಲಾಗಿದೆ.
ಬಿಕ್ಕರ್ನಕಟ್ಟೆ ನಗರದ ಪ್ರಮುಖ ಸ್ಥಳವಾಗುವುದರಿಂದ ನಿತ್ಯ ತ್ಯಾಜ್ಯ ವೀಕ್ಷಿಸುವ ದೌರ್ಭಾಗ್ಯ ಇಲ್ಲಿನ ಜನರಿಗೆ ಒದಗಿದೆ. ನಗರದ ವಿವಿಧ ಹೋಟೆಲ್, ಅಂಗಡಿ, ಕಾಂಪ್ಲೆಕ್ಸ್ ಇತ್ಯಾದಿಗಳ ತ್ಯಾಜ್ಯವನ್ನು ವಾಹನದಲ್ಲಿ ತಂದು ರಾತ್ರಿ ವೇಳೆ ಎಸೆದು ಹೋಗುವ ಸಾಧ್ಯತೆ ಇದೆ. ಇಲ್ಲಿರುವ ಬಹುತೇಕ ತ್ಯಾಜ್ಯ ದೊಡ್ಡ ಗೋಣಿಚೀಲಗಳು, ಕಪ್ಪು ಬಣ್ಣದ ಗಾರ್ಬೇಜ್ ಬ್ಯಾಗ್ಗಳಲ್ಲಿದ್ದು, ಯಾರು ಎಸೆದಿರುವುದು ಎಂದು ಪತ್ತೆ ಹಚ್ಚಬೇಕಿದೆ. ಜತೆಗೆ ಸ್ಥಳೀಯ ನಾಗರಿಕರು ಕೂಡ ಇಲ್ಲಿ ಕಸ ಎಸೆಯುತ್ತಿರುವುದು ಕಂಡು ಬರುತ್ತಿದೆ. ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಪ್ರಸ್ತುತ ಬಿದ್ದಿರುವ ತ್ಯಾಜ್ಯವನ್ನು ತೆರವುಗೊಳಿಸುವುದು ಮಾತ್ರವಲ್ಲದೆ, ಮುಂದಕ್ಕೆ ಯಾರೂ ತ್ಯಾಜ್ಯ ಎಸೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಎಂ.ಸಿ.ಸಿ ವತಿಯಿಂದ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಕೂಡ ಇತ್ತೀಚೆಗೆ ನಾಪತ್ತೆಯಾಗಿವೆ. ಕಸ ಹಾಕದಂತೆ ಎಚ್ಚರಿಕೆ ನೀಡುವ ಬೋರ್ಡ್ಗಳು ಮಾತ್ರ ಅಲ್ಲಿ ಇವೆಯೇ ಹೊರತು, ಪ್ರಸ್ತುತ ಕ್ಯಾಮೆರಾವೇ ಮಾಯವಾಗಿದೆ. ಇದು ತ್ಯಾಜ್ಯ ಎಸೆಯುವವರಿಗೆ ವರದಾನವಾಗಿ ಪರಿಣಮಿಸಿದೆ. ಬಿಕ್ಕರ್ನಕಟ್ಟೆ ರೈಲ್ವೆ ಓವರ್ಬ್ರಿಡ್ಜ್ ಬಳಿ ದೀಪ ಇಲ್ಲದೆ ರಸ್ತೆ ಪೂರ್ತಿ ಕತ್ತಲೆ ವಾತಾವರಣವಿರುತ್ತದೆ.
ಇಂತಹ ಸ್ಥಳ ಕಂಡು ಹೈಮಾಸ್ ದೀಪ ಅಳವಡಿಸಿದರೂ ಬೇರೆ ಕಡೆ ಬೆಳಕಿಲ್ಲ. ಹಗಲು ಹೊತ್ತಿನಲ್ಲಿ ವಾಹನಗಳು ಓಡಾಡುವುದರಿಂದ ತ್ಯಾಜ್ಯ ಎಸೆಯುವುದು ಸುಲಭವಲ್ಲ, ಹಾಗಾಗಿ ಬಹುತೇಕ ರಾತ್ರಿ ಅಥವಾ ಮುಂಜಾನೆ ವೇಳೆಯಲ್ಲಿ ತ್ಯಾಜ್ಯ ಎಸೆಯುವ ಸಾಧ್ಯತೆಯಿದೆ ಎನ್ನುತ್ತಾರೆ ಸ್ಥಳೀಯರು. ಕೆಲವು ಮನೆ, ಪಿಜಿ, ಹಾಸ್ಟೆಲ್ಗಳಿಂದ ಊಟದ ಉಳಿಕೆ ಕಸವನ್ನು ಕೂಡ ತಂದು ಎಸೆದು ಹೋಗುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯ ನಾಗರಿಕರು.