ವಿಟ್ಲ, ಜೂ. 24 (DaijiworldNews/TA): ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ವಿಟ್ಲ ವನ್ನು ತಾಲೂಕನ್ನಾಗಿ ಮಾಡಬೇಕು ಹಾಗೂ ಈ ಹಿಂದೆ ಇದ್ದ ವಿಟ್ಲ ವಿಧಾನಸಭಾ ಕ್ಷೇತ್ರವನ್ನು ಮರಳಿ ಪಡೆಯುವ ಸಲುವಾಗಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಟ್ಲದ ಜೈನ ಬಸದಿಯಿಂದ ನಾಡಕಚೇರಿವರೆಗೆ ಸಾಂಕೇತಿಕವಾಗಿ ಜಾಥ ನಡೆಯಿತು.

ಈ ವೇಳೆ ವಿಟ್ಲ ತಾಲೂಕು ಹಾಗೂ ವಿಟ್ಲ ವಿಧಾನಸಭಾ ಕ್ಷೇತ್ರ ಮರುಸ್ಥಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ರಮಾನಾಥ ವಿಟ್ಲರವರು ಮಾತನಾಡಿ ಇದೊಂದು ಸಾಂಕೇತಿಕ ಕಾರ್ಯಕ್ರಮವಾಗಿದೆ. ವಿಟ್ಲವನ್ನು ತಾಲೂಕನ್ನಾಗಿ ಮಾಡುವ ಕೂಗು ಸುಮಾರು 60 ವರ್ಷಗಳ ಹಿಂದಿನಿಂದಲೂ ಇತ್ತು. ಆದರೆ ಈವರೆಗೆ ತಾಲೂಕಿನ ಕನಸು ನನಸಾಗಲಿಲ್ಲ. ಮುಂದೆ ಬೆಂಗಳೂರು ಚಲೋ ಕಾರ್ಯಕ್ರಮ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ತಾಲೂಕನ್ನಾಗಿ ಮಾಡುವ ಕೆಲಸ ನಡೆಯಲಿದೆ ಎಂದರು.
ಬಳಿಕ ವಿಟ್ಲದ ಉಪತಹಶೀಲ್ದಾರ್ ರಶ್ಮಿರವರಲ್ಲಿ ಸಮಿತಿಯವರು ಮನವಿ ನೀಡಿದರು. ಈ ಸಂದರ್ಭ,ಸಮಿತಿ ಉಪಾಧ್ಯಕ್ಷರಾದ ಬಿ.ಎಂ.ಹಸೈನಾರ್ ಸೇರಿದಂತೆ ಹಲವಾರು ಭಾಗಿಯಾಗಿದ್ರು.